ಕೆಸಿ ವ್ಯಾಲಿ ವಿರೋಧಿಸಿದವರು ಸಮಾಜದ್ರೋಹಿಗಳು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ದಿ. ಎಂ.ವಿ.ಕೃಷ್ಪಪ್ಪ ಜನ್ಮಶತಮಾನೋತ್ಸವ ಕಾರ್ಯಕ್ರಮ

ಕೋಲಾರ, ಫೆ.3: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಸಿ ವ್ಯಾಲಿ ಯೋಜನೆಗೆ ಅಡಗಾಲು ಹಾಕಿರುವವರು ಸಮಾಜದ್ರೋಹಿಗಳು. ಅಂತಹವರ ಬಗ್ಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ತ್ಯಾಜ್ಯ ನೀರನ್ನು ನೇರವಾಗಿ ಬಳಸಿ ತರಕಾರಿ ಬೆಳೆಯುತ್ತಿದ್ದಾರೆ. ಅದನ್ನು ತಿಂದಿದ್ದೇವೆ. ಆದರೆ ಸಂಸ್ಕರಣೆ ಮಾಡಿದ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸಲು ಮುಂದಾದರೆ ಅದರ ವಿರುದ್ಧ ಕೆಲವರು ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಅವರು ಜನವಿರೋಧಿಗಳು ಎಂದು ಅವರು ಹೇಳಿದರು.
ಎಂ.ವಿ.ಕೃಷ್ಣಪ್ಪ ಅವರ ಪುತ್ರ ಜಯಸಿಂಹ ಕೃಷ್ಣಪ್ಪ ಮಾತನಾಡಿ, ನಮ್ಮ ತಂದೆ ನಮಗೆ ಅಪಾರ ಆಸ್ತಿ ಮಾಡಿ ಹೋಗಲಿಲ್ಲ. ಆದರೆ ಅಪಾರ ಜನರ ಬೆಂಬಲವನ್ನು ನೀಡಿ ಹೋಗಿದ್ದಾರೆ. ನಾನು ಐದು ಬಾರಿ ಕೋಚಿಮುಲ್‌ಗೆ ಸತತ ಆಯ್ಕೆಯಾಗಲು ಬಂಗಾರಪೇಟೆ ತಾಲೂಕಿನ ಜನರೇ ಕಾರಣ. ಇಂತಹ ಕಾರ್ಯಕ್ರಮದ ಮೂಲಕ ತಮ್ಮ ತಂದೆಯನ್ನು ಸ್ಮರಿಸಲು ಮುಂದಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಕೃಷಿ ಸಚಿವ ಶಿವಶಂಕರರೆಡ್ಡಿ, ಸಂಸದರಾದ ಕೆ.ಎಚ್.ಮುನಿಯಪ್ಪ, ರಾಜೂಗೌಡ, ಶಾಸಕರಾದ ವಿ.ಮುನಿಯಪ್ಪ, ನಸೀರ್ ಅಹಮದ್, ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್, ಚೌಡರೆಡ್ಡಿ, ಮಾಜಿ ಶಾಸಕರಾದ ಡಾ. ಸುಧಾಕರ್, ಚೌಡರೆಡ್ಡಿ, ರಾಜಣ್ಣ, ಎಂ.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮುಖಂಡರಾದ ಸಿ.ಎಂ.ಮುನಿಯಪ್ಪ ಮತ್ತಿತರರುಉಪಸ್ಥಿತರಿದ್ದರು.
ಯೋಜನೆಗಳಿಗೆ ರಮೇಶ್ ಕುಮಾರ್ ದುಂಬಾಲು ಬಿದ್ದಿದ್ದರು
ನರಸಾಪುರ ಕೆರೆ ಭರ್ತಿಯಾಗಿರುವುದು ನೋಡಿದರೆ ಖುಷಿಯಾಗುತ್ತದೆ. ಇಂತಹ ಯೋಜನೆಗೆ ವಿರೋಧ ವ್ಯಕ್ತಪಡಿಸುವವರನ್ನು ಒಕ್ಕೊರಲಿನಿಂದ ಖಂಡಿಸಿ ಎಂದು ಹೇಳಿದ ಸಿದ್ದರಾಮಯ್ಯ, ಸುಮಾರು 2,500 ಕೋಟಿ ರೂ. ವೆಚ್ಚದಲ್ಲಿ ಕೆಸಿ ವ್ಯಾಲಿ ಹಾಗೂ ಹೆಬ್ಬಾಳ ವ್ಯಾಲಿ ಯೋಜನೆ ನೀಡಿದ್ದೇನೆ. ಈ ಯೋಜನೆಗಳಿಗೆ ರಮೇಶ್ ಕುಮಾರ್ ದುಂಬಾಲು ಬಿದ್ದರು. ಕೃಷ್ಣಭೈರೇಗೌಡ, ಸಂಸದ ಮುನಿಯಪ್ಪ ಮತ್ತಿತರರು ಒತ್ತಡ ಹಾಕಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೆಹರೂ ಅವರಿಂದ ಆಕರ್ಷಿತರಾದ ಎಂ.ವಿ.ಕೃಷ್ಣಪ್ಪರಿಂದ ಇಂದು ನಮ್ಮ ಜಿಲ್ಲೆಯ ಜನತೆ ನೆಮ್ಮದಿಯ ಬದುಕು ಸಾಗಿಸುವಂತಾಗಿದೆ. ಅಂತಹ ಹೋರಾಟಗಾರರನ್ನು ಸ್ಮರಿಸುವ ಕೆಲಸ ನಿಜಕ್ಕೂ ಶ್ಲಾಘನೀಯ.
-ಕೆ.ಎಚ್.ಮುನಿಯಪ್ಪ, ಸಂಸದ







