ಮೋದಿ ವಿರುದ್ಧ ದೀದಿ ಸಮರ: ಕೊಲ್ಕತ್ತಾ ಕೆಂಡ
ಕೊಲ್ಕತ್ತಾ, ಫೆ.4: ಹದಿಮೂರು ವರ್ಷಗಳ ಹಿಂದೆ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಮಧ್ಯರಾತ್ರಿಯಿಂದ ಧರಣಿ ಕುಳಿತಿದ್ದಾರೆ. ರಾಜ್ಯದ ಬಜೆಟ್ ಬಗ್ಗೆ ಚರ್ಚಿಸಲು ಧರಣಿ ಸ್ಥಳದಲ್ಲೇ ಸೋಮವಾರ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದೆ.
ಈ ಮಧ್ಯೆ ಸಿಎಂ ಧರಣಿಯನ್ನು ಬೆಂಬಲಿಸಿ ಬೃಹತ್ ರ್ಯಾಲಿಗಳನ್ನು ರಾಜ್ಯಾದ್ಯಂತ ನಡೆಸಲು ಟಿಎಂಸಿ ಕಾರ್ಯಕರ್ತರು ಸಿದ್ಧತೆ ನಡೆಸಿದ್ದು, ಇಡೀ ರಾಜ್ಯ ಬಿಜೆಪಿ ಹಾಗೂ ಟಿಎಂಸಿ ನಡುವಿನ ರಣಾಂಗಣವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಕೊಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ ಬೆನ್ನಲ್ಲೇ ಮಮತಾ ದಿಢೀರ್ ಧರಣಿ ಆರಂಭಿಸಿದ್ದು, ಸಮಸ್ಯೆ ಬಗೆಹರಿಯುವವರೆಗೆ ಧರಣಿ ಮುಂದುವರಿಸುವುದಾಗಿ ಹೇಳಿದ್ದಾರೆ.
ಟಿಎಂಸಿ ಕಾರ್ಯಕರ್ತರ ಆಕ್ರೋಶ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ಕೇಂದ್ರ ಸರ್ಕಾರಿ ಕಚೇರಿ ಆವರಣಗಳಿಗೆ ಬಿಗಿ ಭದ್ರತೆ ಆಯೋಜಿಸಿದೆ. ಈ ಮಧ್ಯೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಟಿಎಂಸಿ ಕಾರ್ಯಕರ್ತರು ರಾಜಧಾನಿಯತ್ತ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ನಿಲ್ಲಿಸಬೇಕು ಎಂದು ಆಗ್ರಹಿಸಿ ಎರಡು ಬಾರಿಯ ಮುಖ್ಯಮಂತ್ರಿ ಧರಣಿ ಆರಂಭಿಸಿದ್ದಾರೆ. ಇದೀಗ ಮಮತಾ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವುದರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಧರಣಿ ಗಮನ ಸೆಳೆದಿದೆ.
"ಹಿಂದೆಂದೂ ಹೀಗಾಗಿರಲಿಲ್ಲ. ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಅವರು ಸಂಚು ರೂಪಿಸಿದ್ದಾರೆ. ಇದು ದಂಗೆಗಿಂಗ ಕಡಿಮೆಯೇನೂ ಅಲ್ಲ. ಸೂಪರ್ ಎಮರ್ಜೆನ್ಸಿ" ಎಂದು ಮಮತಾ ಕಿಡಿ ಕಾರಿದರು.
"ಗಬ್ಬರ್ ಶೈಲಿಯಲ್ಲಿ ಎಲ್ಲವನ್ನೂ ನಿಯಂತ್ರಿಸಲು ಅವರು ಬಯಸಿದ್ದಾರೆ. ಇದು ಸಂವಿಧಾನಾತ್ಮಕ ವೈಫಲ್ಯ. ಸಂವಿಧಾನವನ್ನು ಸಂರಕ್ಷಿಸುವ ಅಗತ್ಯವಿದೆ. ಅಧಿಕಾರ ಕಳೆದುಕೊಳ್ಳುವ ಭೀತಿ ಅವರನ್ನು ಖಿನ್ನತೆಗೆ ತಳ್ಳಿದೆ. ಆದ್ದರಿಂದ ಏನು ಮಾಡಲೂ ಅವರು ಸಿದ್ಧರಾಗಿದ್ದಾರೆ. ಇದು ನಿಲ್ಲಬೇಕು ಎಂಬ ಕಾರಣಕ್ಕೆ ಈ ಸತ್ಯಾಗ್ರಹ" ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದರು.
ಕೇವಲ ಬಂಗಾಳ ಮಾತ್ರ ಅಪಾಯ ಎದುರಿಸುತ್ತಿಲ್ಲ; ಪ್ರತಿ ರಾಜ್ಯಗಳೂ ಇಂಥ ಭೀತಿ ಎದುರಿಸುತ್ತಿವೆ. ಅವರದ್ದು ರಾಜಕೀಯ ದುರುದ್ದೇಶ. ಕೊಲ್ಕತ್ತಾದಲ್ಲಿ ಕೋಮು ಸಂಘರ್ಷ ಹಬ್ಬಿಸಲು ಪ್ರಯತ್ನಿಸಿದ್ದಾರೆ ಎಂಬ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ. ಪ್ರತಿಯೊಬ್ಬರೂ ಇದಕ್ಕೆ ಧ್ವನಿಗೂಡಿಸಬೇಕು ಎಂದು ಮಮತಾ ಕರೆ ನೀಡಿದರು.
ಇತ್ತೀಚಿನ ಬಿಜೆಪಿ ರ್ಯಾಲಿಗಳಲ್ಲಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದ್ದ ಮಮತಾ ಬ್ಯಾನರ್ಜಿಯವರನ್ನು ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ನಾಯಕರನ್ನು ಅವಮಾನಿಸುವ ಸಲುವಾಗಿ ಚುನಾವಣಾ ಪೂರ್ವದಲ್ಲಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.