ವೇತನ ಏರಿಕೆಗಾಗಿ ಬಿಸಿಯೂಟ ನೌಕರರ ಪ್ರತಿಭಟನೆ

ಮಂಗಳೂರು, ಫೆ.4: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ಮಧ್ಯಂತರ ಬಜೆಟ್‌ನಲ್ಲಿ ವೇತನ ಏರಿಕೆ ಮಾಡದಿರುವುದನ್ನು ಖಂಡಿಸಿ ಬಿಸಿಯೂಟ ನೌಕರರು ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜಗತ್ತಿನ ಭೂಪಟದಲ್ಲಿ ಭಾರತವು ಕಂಗೊಳಿಸುತ್ತಿದೆ ಎನ್ನುತ್ತಿದೆ. ಆದರೆ ಬಿಸಿಯೂಟ ನೌಕರರಂತಹ ಕಾರ್ಮಿಕರು ಕೇವಲ 2,700 ರೂ.ವೇತನದಲ್ಲಿ ಬದುಕುತ್ತಿದ್ದಾರೆ. ನೋಟು ಮಾನ್ಯತೆ ರದ್ದು, ಜಿಎಸ್‌ಟಿ ಹೇರಿಕೆಯಿಂದಾಗಿ ಅಗತ್ಯ ವಸ್ತುಗಳು ವಿಪರೀತವಾಗಿ ಬೆಲೆ ಏರಿಕೆ ಆಗಿದೆ. ಈ ಬೆಲೆ ಏರಿಕೆ ಸರಿದೂಗಿಸಲು ವೇತನ ಏರಿಕೆ ಮಾಡಬೇಕೆಂಬ ಬೇಡಿಕೆಯು ಈ ಬೆಲೆ ಏರಿಕೆಯನ್ನು ಸರಿದೂಗಿಸಬಹುದು. ಆದರೆ ಕೇಂದ್ರ ಸರಕಾರ ವೇತನ ಏರಿಕೆ ಮಾಡದೆ ಮೋಸ ಮಾಡಿದೆ. ಅಲ್ಲದೆ ಬಜೆಟ್‌ನಲ್ಲಿ ಗೋರಕ್ಷಣೆಗಾಗಿ 750 ಕೋ.ರೂ. ನಿಗದಿಪಡಿಸಿದ ಸರಕಾರ ರೈತರಿಗಾಗಿ ಕೇವಲ 500 ಕೋ.ರೂ.ವನ್ನು ಕಾದಿರಿಸಿದೆ. ಪಿಎಫ್ ಕಾರ್ಮಿಕರಿಗೆ ಕನಿಷ್ಟ ಪೆನ್‌ಷನ್ 6,000 ರೂ. ನಿಗದಿಪಡಿಸಿದ ಸರಕಾರ ಅಸಂಘಟಿತ ಕಾರ್ಮಿಕರಿಗೆ 3,000 ರೂ. ನೀಡಲು ಮುಂದಾಗಿದೆ. ಚುನಾವಣೆಯಲ್ಲಿ ಮತೊಮ್ಮೆ ಗೆಲ್ಲಲು ಈ ರೀತಿಯ ಮೋಸವನ್ನು ನರೇಂದ್ರ ಮೋದಿ ಸರಕಾರ ಮಾಡುತ್ತಿದೆ ಎಂದರು.
ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಬಿಸಿಯೂಟ ನೌಕರರ ನಾಯಕಿಯರಾದ ರೇಖಲತಾ, ಬಬಿತಾ, ಪ್ರಮೀಳಾ, ಜಯಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.
ಸಂಘದ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ ಸ್ವಾಗತಿಸಿದರು. ಭವ್ಯಾ ವಂದಿಸಿದರು.







