ಅಮೆರಿಕ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ: ತುಳಸಿ ಗ್ಯಾಬರ್ಡ್ ಘೋಷಣೆ

ವಾಶಿಂಗ್ಟನ್, ಫೆ. 4: ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿರುವ ಮೊದಲ ಹಿಂದೂ ತುಳಸಿ ಗ್ಯಾಬರ್ಡ್, ಯುದ್ಧವಿರೋಧಿ ಸಂದೇಶದೊಂದಿಗೆ ಅಮೆರಿಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ತನ್ನ ಇಂಗಿತವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ವಿದೇಶಗಳ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ನಡೆಸುವುದನ್ನು ಅವರು ತಿರಸ್ಕರಿಸಿದ್ದಾರೆ ಹಾಗೂ ಹೊಸ ಯುದ್ಧಗಳನ್ನು ಎದುರುನೋಡುತ್ತಿರುವುದಕ್ಕಾಗಿ ಉಭಯ ಪಕ್ಷಗಳಲ್ಲಿರುವ ‘ಪ್ರಭಾವಿ ರಾಜಕಾರಣಿ’ಗಳನ್ನು ಟೀಕಿಸಿದ್ದಾರೆ.
ಆದರೆ, ಅವರ ಚುನಾವಣಾ ಅಭಿಯಾನ ಆರಂಭದಲ್ಲೇ ಸಮಸ್ಯೆಗೆ ಸಿಲುಕಿಕೊಂಡಿದೆ. ಅವರ ಚುನಾವಣಾ ಪ್ರಚಾರ ನಿರ್ವಾಹಕರು ಈಗಾಗಲೇ ಬಿಟ್ಟು ಹೋಗಿದ್ದಾರೆ ಹಾಗೂ ಸಲಹಾ ಸಂಸ್ಥೆಯ ಜೊತೆಗಿನ ನಂಟನ್ನು ಅವರು ಕಡಿದುಕೊಂಡಿದ್ದಾರೆ. ತನ್ನ ಹಿಂದಿನ ಎಲ್‌ಜಿಬಿಟಿಕ್ಯೂ ನಿಲುವಿಗಾಗಿ ಅವರು ಈಗಾಗಲೇ ಕ್ಷಮೆ ಕೇಳಿರುವುದನ್ನು ಸ್ಮರಿಸಬಹುದಾಗಿದೆ.
ನಾಲ್ಕು ಬಾರಿಯ ಡೆಮಾಕ್ರಟಿಕ್ ಸಂಸದೆ ತುಳಸಿ, ತನ್ನ ತವರು ರಾಜ್ಯ ಹವಾಯಿಯ ಹೊನೊಲುಲುವಿನಲ್ಲಿರುವ ಪ್ರಸಿದ್ಧ ಬೀಚ್ ‘ವೈಕೀಕಿ’ಯಿಂದ ತನ್ನ ಅಭಿಯಾನವನ್ನು ಆರಂಭಿಸಿದರು.
‘‘ಹೊಸ ಯುದ್ಧಗಳ ಬಗ್ಗೆ ಹಾಗೂ ಜನರು ಸಾಯುವ ಹೊಸ ಸ್ಥಳಗಳ ಬಗ್ಗೆ ದಂತ ಗೋಪುರಗಳಲ್ಲಿ ಕುಳಿತು ಯೋಚಿಸುವ ಎರಡೂ ರಾಜಕೀಯ ಪಕ್ಷಗಳ ಪ್ರಭಾವಿ ರಾಜಕಾರಣಿಗಳಿಗೆ ವಿರುದ್ಧವಾಗಿ ನಾವು ನಿಲ್ಲಬೇಕು’’ ಎಂದು ತುಳಸಿ ನುಡಿದರು.
‘‘ಟ್ರಿಲಿಯನ್‌ಗಟ್ಟಳೆ ಡಾಲರ್‌ಗಳನ್ನು ಪೋಲು ಮಾಡುವ, ಲಕ್ಷಾಂತರ ಜೀವಗಳನ್ನು ನಾಶಗೊಳಿಸುವ, ನಮ್ಮ ಆರ್ಥಿಕತೆ ಮತ್ತು ಭದ್ರತೆಯನ್ನು ಕಡೆಗಣಿಸುವ ಹಾಗೂ ನಮ್ಮ ಮಧ್ಯಮ ವರ್ಗವನ್ನು ನಾಶಪಡಿಸುವ ಯೋಜನೆಗಳಿಂದ ನಾವು ದೂರ ಸರಿಯುತ್ತೇವೆ’’ ಎಂದರು.







