ನಿರ್ಗಮಿತ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾರಿಗೆ ಬೀಳ್ಕೊಡುಗೆ

ಮಡಿಕೇರಿ, ಫೆ.4 : ನಿರ್ಗಮಿತ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರಿಗೆ ಜಿಲ್ಲಾಧಿಕಾರಿ ಕಚೇರಿ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಸೋಮವಾರ ನಡೆಯಿತು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಶಂಸುದ್ದೀನ್, ಶಿರಸ್ತೆದಾರರಾದ ಅಣ್ಣಯ್ಯ, ಪ್ರಕಾಶ್, ತಹಶೀಲ್ದಾರರಾದ ಕುಸುಮ, ಗೋವಿಂದರಾಜು ಇತರರು ಹಾಜರಿದ್ದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜಿಲ್ಲೆಯಲ್ಲಿ ಜಿ.ಪಂ.ಸಿಇಒ ಹಾಗೂ ಜಿಲ್ಲಾಧಿಕಾರಿಯಾಗಿ ಸಲ್ಲಿಸಿದ ಕರ್ತವ್ಯ ಮರೆಯಲು ಸಾಧ್ಯವಿಲ್ಲ ಎಂದರು.
ಪ್ರಕೃತಿ ವಿಕೋಪ, ಚುನಾವಣಾ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರಿಗಳು ಸಹಕಾರ ನೀಡಿ ಕೆಲಸ ಮಾಡಿರುವುದಕ್ಕೆ ಕೃತಜ್ಞತೆ ತಿಳಿಸಿದರು. ಕೊಡಗು ಜಿಲ್ಲೆಯ ಅನುಭವ ಅವಿಸ್ಮರಣೀಯ ಎಂದು ತಿಳಿಸಿದರು.
ಜಿಲ್ಲಾಧಿಕಾರಿಯವರೊಂದಿಗೆ ಕಳೆದ ಸೇವಾ ಅವಧಿಯಲ್ಲಿ ಕಾರ್ಯಕ್ಷಮತೆಯನ್ನು ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ ಪ್ರಕಾಶ್, ಅಣ್ಣಯ್ಯ ಅವರು ಹಂಚಿಕೊಂಡರು. ಅಪರ ಜಿಲ್ಲಾಧಿಕಾರಿ ಶ್ರೀನಿವಾಸ ಅನುಭವ ತಿಳಿಸಿದರು. ಸಮಾರಂಭದಲ್ಲಿ ಕಚೇರಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.








