ಕ್ಯಾನ್ಸರ್ ಮಹಾಮಾರಿಗೆ ಕೆಟ್ಟ ಚಟಗಳೇ ಕಾರಣ: ಡಾ.ಮಧುಸೂದನ್ ನಾಯಕ್

ಉಡುಪಿ, ಫೆ. 4: ಕೆಟ್ಟ ಚಟಗಳಿಂದಾಗಿ ಇಂದು ಕ್ಯಾನ್ಸರ್ ಮಹಾಮಾರಿ ಜಾಸ್ತಿ ಆಗುತ್ತಿದ್ದು, ಉತ್ತಮ ರೀತಿಯ ದೈನಂದಿನ ಚಟುವಟಿಕೆಗಳಿಂದಾಗಿ ಕ್ಯಾನ್ಸರ್ ರೋಗದಿಂದ ದೂರ ಉಳಿಯಬಹುದಾಗಿದೆ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಜ್ಜರ ಕಾಡು ಜಿಲ್ಲಾಸ್ಪತ್ರೆ, ಜಿಲ್ಲಾ ಎನ್.ಸಿ.ಡಿ. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸ್ಪತ್ರೆಯ ಆವರಣದಲ್ಲಿ ಸೋಮವಾರ ಆಯೋಜಿಸಲಾದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಇಂದು ಗುಟ್ಕಾ ಹಾಗೂ ಮದ್ಯ ಸೇವನೆ ಮಾಡುವವರ ಸಂಖ್ಯೆ ವೃದ್ಧಿಯಾಗು ತ್ತಿದ್ದು, ಇದರ ಪರಿಣಾಮವಾಗಿ ಬಾಯಿಯ ಕ್ಯಾನ್ಸರ್ ಹಾಗೂ ಲೀವರ್ ಕ್ಯಾನ್ಸರ್‌ಗಳು ಕೂಡ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಕ್ಯಾನ್ಸರ್ ಕಾಯಿಲೆ ಯನ್ನು ಶೀಘ್ರ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ಕ್ಯಾನ್ಸರ್ ಬಾರದಂತೆ ಮುತುವರ್ಜಿ ವಹಿಸುವುದು ಬಹಳ ಮುಖ್ಯವಾಗಿದೆ ಎಂದರು.
ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದ ಜಿಲ್ಲಾಸ್ಪತ್ರೆಯ ಕ್ಷಕಿರಣ ತಜ್ಞೆ ಡಾ. ಆಮ್ನ ಹೆಗ್ಡೆ, ಎಲ್ಲ ಕ್ಯಾನ್ಸರ್‌ಗಳ ಪೈಕಿ ಸ್ತನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬೊಜ್ಜುತನ ಹಾಗೂ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು ಹಾಗೂ ಮದ್ಯ ಪಾನ ಸೇವನೆ ಕಾರಣ. 20-40ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಯಾನ್ಸರ್ ಕಂಡುಬರುತ್ತವೆ ಎಂದು ತಿಳಿಸಿದರು.
ಶ್ವಾಸಕೋಶದ ಕ್ಯಾನ್ಸರ್ ಕುರಿತು ಜಿಲ್ಲಾಸ್ಪ್ರತ್ರೆಯ ವೈದ್ಯಾಧಿಕಾರಿ ಡಾ.ಚಂದ್ರ ಶೇಖರ್ ಅಡಿಗ ಮಾತನಾಡಿ, ಶ್ವಾಸಕೋಶದ ಕ್ಯಾನ್ಸರ್ ಶೇ.70-80ರಷ್ಟು ತಂಬಾಕು ಸೇವನೆಯಿಂದ ಹಾಗೂ ಶೇ.30ರಷ್ಟು ವಾಯು ಮಾಲಿನ್ಯ ಹಾಗೂ ತಂಬಾಕಿನ ಹೊಗೆ ಸೇವನೆಯಿಂದ ಬರುತ್ತದೆ. 15ವರ್ಷ ವಯಸ್ಸಿನಲ್ಲಿ ತಂಬಾಕು ಸೇವನೆ ಆರಂಭಿಸಿದ ಶೇ.50ರಷ್ಟು ಮಂದಿ 30-40ವರ್ಷ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಸರ್ವೇಕ್ಷಣ ಘಟಕದ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಉದ್ಘಾಟಿಸಿದರು. ಸ್ತ್ರೀರೋಗ ತಜ್ಞೆ ಡಾ.ದೀಕ್ಷಿತ್ ಗರ್ಭಕೋಶದ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಜಿಲ್ಲಾಸ್ಪತ್ರೆಯ ರೋಗಶಾಸ್ತ್ರಜ್ಞ ಡಾ.ಶಶಿ ಕುಮಾರ್, ರಕ್ತನಿದಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಯ ಆಪ್ತ ಸಮಾಲೋಚಕರಾದ ಮನು ಸ್ವಾಗತಿಸಿದರು. ಕೃತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಉಡುಪಿ ನ್ಯೂ ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕ್ಯಾನ್ಸರ್ ಜಾಗೃತಿ ಕುರಿತ ಬೀದಿನಾಟಕ ಪ್ರದರ್ಶನ ನಡೆಯಿತು.








