ಉಡುಪಿ: ಕಾರ್ಮಿಕ ಸಮ್ಮಾನ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ, ಫೆ. 4: ಅಸಂಘಟಿತ ಕಾರ್ಮಿಕರುಗಳಿಗೆ ಜಿಲ್ಲಾ ಮಟ್ಟದಲ್ಲಿ ಮೇ 1ರಂದು ಕಾರ್ಮಿಕರ ಸಮ್ಮಾನ ದಿನ ಆಚರಣೆ ಮಾಡುವ ಪ್ರಯುಕ್ತ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ನೀಡುವ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅಪರ ಜಿಲ್ಲಾಧಿಕಾರಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹ ಕೃತ್ಯದ ಕಾರ್ಮಿಕರು, ಹಮಾಲರು, ದರ್ಜಿಗಳು (ಟೈಲರ್ಸ್), ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಮೆಕ್ಯಾನಿಕ್‌ಗಳು, ಚಿಂದಿ ಆಯುವವರು, ಮೂರು ಚಕ್ರ ( ಆಟೋ ಚಾಲಕರು) ಮತ್ತು ನಾಲ್ಕು ಚಕ್ರ ವಾಹನ ನಡೆಸುವ ಖಾಸಗಿ ವಾಣಿಜ್ಯ ವಾಹನ ಚಾಲಕರು, ಅಗಸರು, ಅಕ್ಕಸಾಲಿಗರು, ಕ್ಷೌರಿಕರು, ಕಮ್ಮಾರರು, ಕುಂಬಾರರು ಹಾಗೂ ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರುಗಳು, ಕಾರ್ಮಿಕ ಸಮ್ಮಾನ ಪ್ರಶಸ್ತಿ ಹಾಗೂ ವಿಶೇಷ ಪುರಸ್ಕಾರ ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಎಡಿಸಿ ತಿಳಿಸಿದರು.
ಅರ್ಜಿಗಳನ್ನು ಮಣಿಪಾಲದಲ್ಲಿರುವ ಕಾರ್ಮಿಕ ಅಧಿಕಾರಿ ಕಚೇರಿ ಅಥವಾ ತಾಲೂಕು ಮಟ್ಟದಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿಗಳಿಂದ ಪಡೆದು ಕೊಂಡು, ಅರ್ಜಿಯಲ್ಲಿ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್‌ಕಾರ್ಡ್‌ನ ಪ್ರತಿ, ಮತದಾರರ ಗುರುತಿನ ಚೀಟಿಯ ಪ್ರತಿ, ಬಿಪಿಎಲ್ ಪಡಿತರ ಚೀಟಿಯ ಪ್ರತಿ, ಶೈಕ್ಷಣಿಕ ಮಟ್ಟದ ಪ್ರಮಾಣ ಪತ್ರ, ತಾಂತ್ರಿಕ ನೈಪುಣ್ಯತೆ ಹೊಂದಿದ್ದಲ್ಲಿ ಸಂಬಂಧಿಸಿದ ದಾಖಲೆಗಳು, ವೃತ್ತಿ ಅನುಭವದ ದಾಖಲೆಗಳು, ಜಾತಿ ಪ್ರಮಾಣ ಪತ್ರದ ಪ್ರತಿ, ಅಂಗವಿಕಲರಿದ್ದಲ್ಲಿ ಅಂಗವಿಕಲ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದವರು ವಿವರಿಸಿದರು.
ಆಯಾ ವರ್ಗದ ಕಾರ್ಮಿಕರು ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ನೊಂದಣಿಯಾಗದೇ ಇದ್ದಲ್ಲಿ ನೊಂದಣಿ ಮಾಡಿಕೊಳ್ಳಬೇಕೆಂದು ಕಾರ್ಮಿಕ ಅಧಿಕಾರಿ ಸಭೆಗೆ ತಿಳಿಸಿದರು. ಆಯಾ ವರ್ಗಗಳ ಓರ್ವ ಕಾರ್ಮಿಕರಿಗೆ ಶ್ರಮ ಸಮ್ಮಾನ ಪ್ರಶಸ್ತಿ ತಲಾ 10000 ರೂ. ನಗದು, ಅಲ್ಲದೇ ತಲಾ ಹತ್ತು ಕಾರ್ಮಿಕ ರಿಗೆ ವಿಶೇಷ ಪುರಸ್ಕಾರ 1000 ರೂ. ನಗದು, ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು.
ಭರ್ತಿ ಮಾಡಿದ ಅರ್ಜಿಯನ್ನು ಫೆ.13ರ ಒಳಗೆ ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್, ಕಾರ್ಮಿಕ ನಿರೀಕ್ಷಕ ಡಿ.ಎಸ್.ಸತ್ಯನಾರಾಯಣ್, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರು/ ಕಾರ್ಯದರ್ಶಿಗಳು, ಬಿಎಂಎಸ್, ಎಐಟಿಯುಸಿ, ಸಿಐಟಿಯುಸಿ ಅಧ್ಯಕ್ಷರು/ ಕಾರ್ಯದರ್ಶಿಗಳು, ಜಿಲ್ಲಾ ಸವಿತಾ ಸಮಾಜದ ಪ್ರತಿನಿಧಿ, ಟೈಲರ್ಸ್ ಅಸೋಸಿಯೇಶನ್ ಪ್ರತಿನಿಧಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.







