ಎಸ್ಸೆಸ್ಸೆಫ್ ‘ಹಿಂದ್ ಸಫರ್’: ಫೆ.5, 6 ರಂದು ಪುತ್ತೂರು, ಮಡಿಕೇರಿ, ಮೈಸೂರಿನಲ್ಲಿ ಸಮಾವೇಶ

ಬೆಂಗಳೂರು, ಫೆ.3: ಸಾಕ್ಷರತೆ ಹಾಗೂ ಸಹಿಷ್ಣುತೆಗಾಗಿ ಭಾರತ ಎಂಬ ಧ್ಯೇಯದೊಂದಿಗೆ ಸುನ್ನಿ ಸ್ಟುಡೆಂಟ್ ಫೆಡರೇಷನ್ ರಾಷ್ಟ್ರೀಯ ಸಮಿತಿಯು ಹಮ್ಮಿಕೊಂಡಿರುವ ‘ಹಿಂದ್ ಸಫರ್’ ಭಾರತ ಯಾತ್ರೆಯು ಬೆಂಗಳೂರಿನಿಂದ ಫೆ.5ರಂದು ಪುತ್ತೂರು, ಫೆ.6 ರಂದು ಮಡಿಕೇರಿ ಹಾಗೂ ಮೈಸೂರಿಗೆ ಪಯಣ ಮುಂದುವರೆಸಲಿದೆ ಎಂದು ಎಸ್‌ಎಸ್‌ಎಫ್‌ನ ರಾಜ್ಯ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಅನ್ವರ್ ತಿಳಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.3ರಂದು ರಾಜ್ಯದ ಹುಬ್ಬಳ್ಳಿಗೆ ಯಾತ್ರೆ ಪ್ರವೇಶಿಸಿದ್ದು, ಫೆ.4ರಂದು ಸೋಮವಾರ ಬೆಂಗಳೂರಿಗೆ ಬರುವ ಯಾತ್ರಾ ತಂಡವನ್ನು ಸಂಜೆ 7.30ಕ್ಕೆ ಬೆಂಗಳೂರಿನ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ಸ್ವಾಗತಿಸಲಾಗುತ್ತದೆ. ಅಲ್ಲದೆ, ಫೆ.7ರಂದು ಕೇರಳದ ಕಲ್ಲಿಕೋಟೆಯ ಕಡಲ ಕಿನಾರೆಯಲ್ಲಿ ನಡೆಯುವ ಬೃಹತ್ ಸಮ್ಮೇಳನದೊಂದಿಗೆ ಯಾತ್ರೆಯನ್ನು ಸಮಾರೋಪ ಮಾಡಲಾಗುತ್ತದೆ ಎಂದು ಹೇಳಿದರು.
ಕಾಶ್ಮೀರದಿಂದ ಕೇರಳದವರೆಗೆ ಹಮ್ಮಿಕೊಂಡಿರುವ ‘ಹಿಂದ್ ಸಫರ್’ ಅನ್ನು ಜ.11ರಂದು ಶ್ರೀನಗರದ ಐತಿಹಾಸಿಕ ಹಝ್ರತ್ ಬಾಲ್ ಮಸೀದಿಯಿಂದ ಆರಂಭಿಸಲಾಗಿದ್ದು, ಯಾತ್ರಾ ತಂಡವು ಪೂರ್ವ, ಮಧ್ಯ ಹಾಗೂ ಈಶಾನ್ಯ ಭಾರತದ 20 ರಾಜ್ಯಗಳ ಸುಮಾರು 12 ಸಾವಿರ ಕಿ.ಮೀ ಸಂಚರಿಸಿದೆ. ಅಲ್ಲದೆ, 50 ಕೇಂದ್ರಗಳಲ್ಲಿ ಲಕ್ಷಾಂತರ ಜನರಿಗೆ ಸಾಕ್ಷರತೆ ಹಾಗೂ ಸಹಿಷ್ಣುತೆಯ ಸಂದೇಶವನ್ನು ಸಾರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಂತರ್‌ರಾಷ್ಟ್ರೀಯ ವಿದ್ವಾಂಸ ಮುಸ್ಲಿಂ ಜಮಾಅತ್ ಸಲಹಾ ಸಮಿತಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮಾರ್ಗದರ್ಶನದಲ್ಲಿ ಪ್ರಸ್ತುತ ಭಾರತ ಯಾತ್ರೆಯನ್ನು ಆಯೋಜಿಸಲಾಗಿದ್ದು, ಮುಸ್ಲಿಂ ಸಮುದಾಯದ ಸ್ಥಿತಿ-ಗತಿಗಳನ್ನು ಅರಿಯಲು, ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಲು ಯಾತ್ರೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶೌಕತ್ ನಈಮಿ ಬುಖಾರಿ ಕಾಶ್ಮೀರಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಸುಹೈರುದೀನ್ ನೂರಾನಿ, ಉಪಾಧ್ಯಕ್ಷ ಡಾ.ಫಾರೂಕ್ ನಈಮಿ, ನೌಷಾದ್ ಅಲಂ ಮಿಸ್ಬಾಹಿ, ಸಾಲಿಕ್ ಅಹ್ಮದ್ ಲತೀಫೀ ಅಸ್ಸಾಂ, ಕ್ಯಾಂಪಸ್ ಸೆಕ್ರೆಟರಿ ಸಯ್ಯಿದ್ ಸಜೀದ್ ಅಲಿ ಕಾಶ್ಮೀರಿ ಸೇರಿದಂತೆ ಪ್ರಮುಖರು ಯಾತ್ರಾ ತಂಡದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ನಗರಾಧ್ಯಕ್ಷ ಹಬೀಬಲ್ಲಾಹ್ ನೂರಾನಿ, ಉಪಾಧ್ಯಕ್ಷ ಶಾಹುಲ್ ಹಮೀದ್ ಅಹ್ಸನಿ ನಿಜಾಮಿ, ಪದಾಧಿಕಾರಿ ಶಾಫಿ ಸಅದಿ ಉಪಸ್ಥಿತರಿದ್ದರು.







