ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 251 ದೇಶದ್ರೋಹ ಪ್ರಕರಣ ದಾಖಲು
ಗುವಾಹಟಿ, ಫೆ. 4: ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರಕಾರ 2016ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಸರಕಾರ 251 ದೇಶ ದ್ರೋಹದ ಪ್ರಕರಣಗಳನ್ನು ದಾಖಲಿಸಿದೆ ಎಂದು ವಿಧಾನ ಸಭೆಗೆ ಸೋಮವಾರ ಮಾಹಿತಿ ನೀಡಲಾಯಿತು.
ಲಿಖಿತ ಪ್ರತಿಕ್ರಿಯೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಚಂದ್ರ ಮೋಹನ್ ಪಟೊವಾರಿ, ಪ್ರಸಕ್ತ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2016 ಮೇ 26ರಿಂದ ವಿವಿಧ ವ್ಯಕ್ತಿಗಳು ಹಾಗೂ ನಿಷೇಧಿತ ಸಂಘಟನೆಗಳ ವಿರುದ್ಧ 251 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದಿದ್ದಾರೆ. ಕಾಂಗ್ರೆಸ್‌ನ ದೇಬವೃತ ಸೈಕಿಯಾ ಅವರ ಪ್ರಶ್ನೆಗೆ ಉತ್ತರಿಸಿದ ಪಟೊವಾರಿ, ಉಲ್ಫಾ (ಐ), ಎನ್‌ಡಿಎಫ್‌ಬಿ (ಎಸ್), ಎನ್‌ಡಿಎಫ್‌ಬಿ (ಬಿ) ಕೆಎಲ್‌ಒ, ಎನ್‌ಎಸ್‌ಎಲ್‌ಎ, ಎನ್‌ಎಸ್‌ಎಲ್‌ಎ (ಎಟಿ), ಯುಪಿಎಲ್‌ಎಫ್‌ಎಸ್, ಡಿಎಚ್‌ಡಿ, ಡಿಎಚ್‌ಎನ್‌ಎ, ಎನ್‌ಎಸ್‌ಸಿಎನ್ (ಐಎಂ), ಝಡ್‌ಯುಎಫ್ ಹಾಗೂ ಎಟಿಎಫ್‌ಗಂತಹ ಉಗ್ರ ಗುಂಪುಗಳ ವಿರುದ್ಧ ದೇಶದ ದ್ರೋಹದ ಪ್ರಕರಣ ದಾಖಲಿಸಲಾಗಿದೆ ಎಂದರು.
ಇಂತಹ ಪ್ರಕರಣಗಳನ್ನು ಹಲವರ ವಿರುದ್ಧ ಕೂಡ ದಾಖಲಿಸಲಾಗಿದೆ. ದಿಬ್ರುಗಢ ಜಿಲ್ಲಿಯ ಹಾಗೂ ಗುವಾಹಟಿ ನಗರದ ಆರ್‌ಟಿಐ ಹೋರಾಟಗಾರ ಹಾಗೂ ರೈತ ಮುಖಂಡ ಅಖಿಲ್ ಗೊಗೊಯಿ ವಿರುದ್ಧ ಎರಡು ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಾದಾತ್ಮಕ ನಾಗರಿಕತ್ವ ತಿದ್ದುಪಡಿ ಮಸೂದೆ ಟೀಕಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಗೊಗೊಯಿ ಜೊತೆಗೆ ಖ್ಯಾತ ಬುದ್ದಿಜೀವಿ, ಸಾಹಿತ್ಯ ಅಕಾಡೆಮಿ ಗೌರವಾನ್ವಿತ ಹಿರೇನ್ ಗೋಹೈನ ಹಾಗೂ ಪತ್ರಕರ್ತ ಮಂಜಿತ್ ಮಹಾಂತ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.