ಗರ್ಭನಾಳ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಲಸಿಕೆ ಅಗತ್ಯ
ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ

ಲಂಡನ್, ಫೆ. 4: ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕೆ ಕುರಿತು ಕಪೋಲಕಲ್ಪಿತ ಸುದ್ದಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಅದನ್ನು ತಿರಸ್ಕರಿಸುತ್ತಿದ್ದಾರೆ; ಇದರಿಂದಾಗಿ ಗರ್ಭನಾಳದ ಕ್ಯಾನ್ಸರನ್ನು ತಡೆಗಟ್ಟುವುದು ಕಷ್ಟವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯೊಂದು ಹೇಳಿದೆ.
ಗರ್ಭನಾಳದ ಕ್ಯಾನ್ಸರ್‌ನಿಂದಾಗಿ ಪ್ರತಿ ವರ್ಷ 3 ಲಕ್ಷಕ್ಕೂ ಅಧಿಕ ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ.
‘ಜಾಗತಿಕ ಕ್ಯಾನ್ಸರ್ ದಿನ 2019’ರ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್‌ಸಿ)ಯು ಹೇಳಿಕೆಯೊಂದನ್ನು ನೀಡಿ, ಎಚ್‌ಪಿವಿ ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಯನ್ನು ಖಾತರಿಪಡಿಸಿದೆ.
‘‘ಎಚ್ ಪಿವಿ ಲಸಿಕೆ ಕುರಿತ ಆಧಾರರಹಿತ ಗಾಳಿ ಸುದ್ದಿಗಳಿಂದಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಗರ್ಭನಾಳದ ಕ್ಯಾನ್ಸರ್ ತಡೆಗೆ ಇದು ತುರ್ತಾಗಿ ಬೇಕಾಗಿದೆ’’ ಎಂದು ಐಎಆರ್‌ಸಿ ನಿರ್ದೇಶಕಿ ಎಲಿಝಬೆತ್ ವೀಡರ್‌ಪಾಸ್ ತಿಳಿಸಿದರು.
ಲೈಂಗಿಕ ಕ್ರಿಯೆಯ ಮೂಲಕ ಮುಖ್ಯವಾಗಿ ಹರಡುವ ಹ್ಯೂಮನ್ ಪ್ಯಾಪಿಲೋಮವೈರಸ್ ಹೆಚ್ಚಿನ ಗರ್ಭನಾಳದ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿದೆ. ಈ ಕ್ಯಾನ್ಸರ್ ಜಗತ್ತಿನಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಓರ್ವ ಮಹಿಳೆಯ ಪ್ರಾಣ ತೆಗೆಯುತ್ತದೆ.







