ಕೇಂದ್ರ ಸರಕಾರ ಭರವಸೆ ಈಡೇರಿಸದೇ ಇದ್ದರೆ ಪದ್ಮ ಭೂಷಣ ಪ್ರಶಸ್ತಿ ಹಿಂದಕ್ಕೆ: ಅಣ್ಣಾ ಹಝಾರೆ
ರಾಳೆಗಣ ಸಿದ್ಧಿ, ಫೆ. 4: ನರೇಂದ್ರ ಮೋದಿ ಸರಕಾರ ನೀಡಿದ ಭರವಸೆ ಈಡೇರಿಸದೇ ಇದ್ದರೆ ಪದ್ಮ ಭೂಷಣ ಪ್ರಶಸ್ತಿ ಹಿಂದಿರುಗಿಸಲಾಗುವುದು ಎಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಅಣ್ಣಾ ಹಝಾರೆ ಹೇಳಿದ್ದಾರೆ.
ಇಂದು ಬೆಳಗ್ಗೆ ಬಿಜೆಪಿಯ ಮಿತ್ರ ಪಕ್ಷವಾದ ಶಿವಸೇನೆ ಅಣ್ಣಾ ಹಝಾರೆ ಅವರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಸಾಮಾಜಿಕ ಹೋರಾಟಗಾರ ಜಯಪ್ರಕಾಶ್ ಅವರನ್ನು ಅನುಸರಿಸಿ ಹಾಗೂ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆಯ ನೇತೃತ್ವ ಮುಂದುವರಿಸಿ ಎಂದು ಶಿವಸೇನೆ ಹಝಾರೆ ಅವರಿಗೆ ಸೂಚಿಸಿತ್ತು.
ಲೋಕಪಾಲರು ಹಾಗೂ ಲೋಕಾಯುಕ್ತರ ನೇಮಕ ಹಾಗೂ ರೈತರ ಸಮಸ್ಯೆಗಳ ಕುರಿತು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಹಝಾರೆ ಅವರು ತನ್ನ ಊರಾದ ಮಹಾರಾಷ್ಟ್ರದ ರಾಳೆಗಣ ಸಿದ್ಧಿ ಗ್ರಾಮದಲ್ಲಿ ಬುಧವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
‘‘ಕೇಂದ್ರ ಸರಕಾರ ಇನ್ನು ಕೆಲವು ದಿನಗಳಲ್ಲಿ ಭರವಸೆ ಈಡೇರಿಸದೇ ಇದ್ದಲ್ಲಿ, ಪದ್ಮ ಭೂಷಣ ಪ್ರಶಸ್ತಿ ಹಿಂದಿರುಗಿಸಲಾಗುವುದು. ಮೋದಿ ಸರಕಾರ ಜನರ ನಂಬಿಕೆ ಕಳೆದುಕೊಂಡಿದೆ’’ ಎಂದು ಅವರು ಹೇಳಿದ್ದಾರೆ. ಕೇಂದ್ರದಲ್ಲಿ ಲೋಕಪಾಲ, ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ, ಕೃಷಿಕರ ಬಿಕ್ಕಟ್ಟು ಪರಿಹರಿಸಲು ಸ್ವಾಮಿನಾಥನ್ ಆಯೋಗದ ಶಿಫಾರಸಿನ ಅನುಷ್ಠಾನ ಹಾಗೂ ಚುನಾವಣಾ ಸುಧಾರಣೆ ಸಹಿತ ಹಲವು ಬೇಡಿಕೆಗಳನ್ನು ಹಝಾರೆ ಅವರು ಕೇಂದ್ರ ಸರಕಾರದ ಮುಂದಿರಿಸಿದ್ದಾರೆ. ಧರಣಿಯಿಂದಾಗಿ ಹಝಾರೆ ಅವರು ಕಳೆದ ಐದು ದಿನಗಳಲ್ಲಿ 3.8 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಮೂತ್ರದಲ್ಲಿ ಕ್ರೀಟಿನೈನ್ ಅಂಶ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.