ಕೇಂದ್ರದ ವಿರುದ್ಧ ಹೋರಾಟಕ್ಕೆ ಮಮತಾ ಬ್ಯಾನರ್ಜಿಗೆ ಪ್ರತಿಪಕ್ಷಗಳ ಬೆಂಬಲ

ಹೊಸದಿಲ್ಲಿ, ಫೆ. 4: ಕೇಂದ್ರದ ವಿರುದ್ಧ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಧರಣಿಗೆ ಪ್ರತಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಆಪ್‌ನ ಅರವಿಂದ ಕೇಜ್ರಿವಾಲ್, ತೆಲುಗುದೇಶಂ ಪಕ್ಷದ ಎನ್. ಚಂದ್ರಬಾಬು ನಾಯ್ಡು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ ಹಾಗೂ ಡಿಎಂಕೆ ವರಿಷ್ಠ ಎಂ.ಕೆ. ಸ್ಟಾಲಿನ್ ಮೊದಲಾದ ನಾಯಕರು ಬ್ಯಾನರ್ಜಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಚಿಟ್ ಫಂಡ್ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರದ ಪ್ರಕರಣಗಳು ವರ್ಷಗಳ ಹಿಂದೆಯೇ ಬಹಿರಂಗಗೊಂಡಿದೆ. ಹಗರಣದ ಪ್ರಧಾನ ಸಂಚುಗಾರ ಬಿಜೆಪಿಗೆ ಸೇರಿದ ಹಿನ್ನೆಲೆಯಲ್ಲಿ ಮೋದಿ ಸರಕಾರ ಮೌನವಾಯಿತು ಎಂದು ಅವರು ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನಡೆಯುತ್ತಿರುವ ಈ ನಾಟಕ ಯಾವುದೇ ಸಿದ್ಧಾಂತವನ್ನು ಹೊಂದಿಲ್ಲ. ಬದಲಾಗಿ ಭ್ರಷ್ಟಾಚಾರವನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿನ ಅಸಂವಿಧಾನಿಕ, ಕೋಮುವಾದಿ ಹಾಗೂ ಅಧಿಕಾರಶಾಹಿ ವಿರುದ್ಧ ಸಿಪಿಎಂ ಹೋರಾಟ ಮುಂದುವರಿಸಲಿದೆ ಎಂದು ಸೀತಾರಾಮ ಯೆಚೂರಿ ಹೇಳಿದರು.







