ಎಫ್ಐಆರ್ ದಾಖಲಾದರೂ ಆರೋಪಿಗಳ ಬಂಧನಕ್ಕೆ ಪೊಲೀಸರ ಹಿಂದೇಟು: ಸಂತ್ರಸ್ಥರ ಆರೋಪ
ವೃದ್ಧೆಯರ ಮೇಲೆ ಬಜರಂಗದಳದಿಂದ ಹಲ್ಲೆ ಪ್ರಕರಣ

ಸಕಲೇಶಪುರ, ಫೆ.4: ಇಲ್ಲಿನ ಸಂತೆ ಮೈದಾನದ ಟೆಂಟ್ ಒಂದರಲ್ಲಿ ಮಾಂಸದ ಆಹಾರ ಮಾರಾಟ ಮಾಡುತ್ತಿದ್ದ ಇಬ್ಬರು ವೃದ್ಧೆಯರಿಗೆ ಹಲ್ಲೆ ನಡೆಸಿ ಟೆಂಟನ್ನು ಸುಟ್ಟು ಹಾಕಿರುವ ಪ್ರಕರಣರ ಆರೋಪಿಗಳಾದ ಬಜರಂಗದಳದ ಕಾರ್ಯಕರ್ತರನ್ನು ಇನ್ನೂ ಬಂಧಿಸದ ಪೊಲೀಸರ ಹಾಗೂ ಈ ಬಗ್ಗೆ ವೌನ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳ ವಿರುದ್ಧ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಸುಮಾರು 40 ವರ್ಷಗಳಿಂದ ವಿವಿಧ ಸಂತೆಗಳಿಗೆ ಹೋಗಿ ಮಾಂಸದ ಅಡುಗೆ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬಾಳೆಗದ್ದೆ ನಿವಾಸಿಗಳಾದ ಖಮರುನ್ನಿಸಾ(70) ಮತ್ತು ಶಂಶಾದ್(70) ಎಂಬವರಿಗೆ ಜನವರಿ 31ರಂದು 8 ಮಂದಿ ಬಜರಂಗದಳದ ಕಾರ್ಯಕರ್ತರ ತಂಡ ಹಲ್ಲೆ ನಡೆಸಿತ್ತು. ಅಲ್ಲದೆ ಅಡುಗೆ ಹಾಗೂ ಪಾತ್ರೆಗಳನ್ನು ಬಿಸಾಡಿ ಟೆಂಟ್‌ಗೆ ಬೆಂಕಿ ಕೊಟ್ಟು ಸುಟ್ಟು ಹಾಕಿ ಇನ್ನು ಮುಂದೆ ಮಾಂಸದ ಅಡುಗೆ ಮಾರಾಟ ಮಾಡದಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಸಂತ್ರಸ್ತರು ಸಕಲೇಶಪುರ ನಗರ ಠಾಣೆ ದೂರು ನೀಡಿದ್ದರು.
ಆರಂಭದಲ್ಲಿ ನಾವು ನೀಡಿದ ದೂರನ್ನು ಪೊಲೀಸರು ಸ್ವೀಕರಿಸದೆ ಸ್ಥಳದಲ್ಲಿ ದನದ ಮಾಂಸ ಪತ್ತೆಯಾಗಿದ್ದು ನಿಮ್ಮ ವಿರುದ್ಧವೂ ದೂರು ದಾಖಲಿಸಬೇಕಾಗುತ್ತದೆ ಎಂದು ಹೇಳಿ ವಾಪಸ್ ಕಳುಹಿಸಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದರು. ಹಲವು ಒತ್ತಡಗಳಿಂದ 28 ಗಂಟೆಯ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ ಘಟನೆ ನಡೆದು ನಾಲ್ಕು ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ ಎಂದು ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಮರಿ ಜೋಸಫ್, ಜಿಲ್ಲಾ ಆದಿವಾಸಿ ಹಸಲರ ಸಂಘದ ಅಧ್ಯಕ್ಷ ನವೀನ್ ಸದಾ, ದಸಂಸ ಮುಖಂಡರಾದ ಬಸವರಾಜ್ ಬೆಳಗೋಡು ರಮೇಶ್, ಹಡ್ಲಳ್ಳಿ ಜಗದೀಶ್, ಎಸ್‌ಡಿಪಿಐ ಮುಖಂಡ ಇರ್ಫಾನ್ ಪಾಶ, ಟಿಪ್ಪು ಸುಲ್ತಾನ್ ಯುವಕರ ಸಂಘದ ಜುಬೇರ್ ಖಾನ್, ಸುನ್ನೀ ವೇಲ್‌ಫೇರ್ ಅಸೋಸಿಯೇಶನ್‌ನ ಮುಝಮ್ಮಿಲ್ ಪಾಶ, ಮೊಮೆಂಟ್ ಫಾರ್ ಜಸ್ಟೀಸ್ ಅಧ್ಯಕ್ಷ ನೇಮಾನ್, ಕಾಂಗ್ರೆಸ್ ಅಲ್ಪಸಂಖ್ಯಾಂತರ ವಿಭಾಗದ ಉಪಾಧ್ಯಕ್ಷ ಎ.ಕೆ.ಹಾರೀಸ್ ಕುಡಗರಹಳ್ಳಿ, ರೈತ ಸಂಘದ ಅಧ್ಯಕ್ಷ ಕ್ಯಾನಹಳ್ಳಿ ರವಿ, ಜೆಡಿಎಸ್ ಮುಖಂಡ ಹಸೈನಾರ್ ಮೊದಲಾದವರು ಆರೋಪಿಗಳನ್ನು ಬಂಧಿಸದ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯ ದೃಶ್ಯಗಳನ್ನು ವೀಡಿಯೊ ಮಾಡಿರುವ ಬಜರಂಗದಳದ ಕಾರ್ಯಕರ್ತರು ತಮ್ಮ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಮಾಡಿ ಯುದ್ದ ಗೆದ್ದವರ ಹಾಗೆ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮತಗಳಿಗಾಗಿ ಕೋಮುವಾದದ ವಿರುದ್ಧ ಮಾತನಾಡುವ ಜಿಲ್ಲೆಯ ಜನಪ್ರತಿನಿಧಿಗಳು ಈಗ ಮೌನವಾಗಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಪಕ್ಷಗಳ ಆಡಳಿತ ಇದ್ದರೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸದಿರುವುದು ಖೇದಕರ ಹಾಗೂ ಖಂಡನೀಯ ಎಂದು ಮುಖಂಡರು ತಿಳಿಸಿದ್ದಾರೆ.
ಸಕಲೇಶಪುರದಲ್ಲಿ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರು ಅಮಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ ಅವರ ಮೇಲೆ ಪೋಲಿಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಕಾರಣದಿಂದಲೇ ದಾಳಿಗಳು ಪುನರಾವರ್ತನೆಯಾಗುತ್ತಿವೆ.
-ಧರ್ಮೆಶ್, ಹಾಸನ ಜಿಲ್ಲಾ ಸಿಐಟಿಯು ಮುಖಂಡ
ಇದು ಹಳೆ ಸಿನಿಮಾದ ರೌಡಿಗಳ ದಬ್ಬಾಳಿಕೆಯ ದೃಶ್ಯದಂತಿದೆ. ಇಂತಹ ಘಟನೆಗಳು ಸಕಲೇಶಪುರದಲ್ಲಿ ನಡೆಯುತ್ತಿದೆ ಎಂದರೆ ಊರಿಗೆ ನಾಚಿಕೆ. ಇಂತಹ ದೌರ್ಜನ್ಯಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು.
-ಸಂತೋಷ್ ಗೌಡ, ಸಕಲೇಶಪುರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ
ಹಲ್ಲೆ ನಡೆಸಿದವರ ಮೇಲೆ ಪೋಲಿಸರು ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತವೆ. ಭಯ ಹುಟ್ಟಿಸುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರು ಪೊಲೀಸ್ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುತ್ತಾರೆ.
-ಸ್ಟೀವನ್ ಪ್ರಕಾಶ್, ಬಿಎಸ್ಪಿ ಹಾಸನ ಜಿಲ್ಲಾ ಮುಖಂಡ
ಇಂದೊಂದು ಅಮಾನವೀಯ ಪ್ರಕರಣ. ಹಾಡಹಗಲೇ ಇಂಥಹ ದಾಳಿ ನಡೆಯುತ್ತಿದೆ ಎಂದರೆ ಕಾನೂನು ಪಾಲಕರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿವೆ. ಪೊಲೀಸರು ಆರೋಪಿಗಳನ್ನು ಬಂಧಿಸದಿರುವುದು ವಿಷಾದನೀಯ. ಹೀಗಾದರೆ ದುರ್ಬಲ ವ್ಯಕ್ತಿಗಳು ಬದುಕುವುದು ಹೇಗೆ?
-ಸತೀಶ್, ಹಾಸನ ಜಿಲ್ಲಾ ಆರ್‌ಪಿಐ ಅಧ್ಯಕ್ಷಜನರಿಗೆ ರಕ್ಷಣೆ, ಭದ್ರತೆ ನೀಡುವುದು ಪೊಲೀಸರ ಕರ್ತವ್ಯ. ಆದರೆ ಕ್ರಿಮಿನಲ್‌ಗಳ ಎದುರು ಪೊಲೀಸರೇ ಕೈಕಟ್ಟಿ ಕುಳಿತರೆ ಸಮಾಜದ ಗತಿಯೇನು? ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಗೃಹ ಸಚಿವರನ್ನು ಭೇಟಿ ಮಾಡುತ್ತೇನೆ. ನನ್ನ ಊರಿನಲ್ಲಿ ಈ ಮಟ್ಟದ ಗೂಂಡಾಗಿರಿಯನ್ನು ಸಹಿಸುವುದಿಲ್ಲ.
-ಅಣ್ಣಪ್ಪ ಆಟೋ, ಪುರಸಭೆ ಕಾಂಗ್ರೆಸ್ ಸದಸ್ಯರು









