ಸರ್ವಾಟೆ ಪ್ರಹಾರಕ್ಕೆ ಸೌರಾಷ್ಟ್ರ ಕಕ್ಕಾಬಿಕ್ಕಿ
ರಣಜಿ ಟ್ರೋಫಿ ಫೈನಲ್

►ವಿದರ್ಭ ಪ್ರಥಮ ಇನಿಂಗ್ಸ್ 312ಕ್ಕೆ ಆಲೌಟ್
►ಅಜೇಯ ಅರ್ಧಶತಕ ಸಿಡಿಸಿದ ಕರ್ನೆವಾರ್
►158ಕ್ಕೆ 5 ವಿಕೆಟ್ ಕಳೆದುಕೊಂಡ ಸೌರಾಷ್ಟ್ರ
►ಶತಕದ ಹೊಸ್ತಿಲಲ್ಲಿ ಸ್ನೆಲ್ ಪಟೇಲ್
ನಾಗ್ಪುರ, ಫೆ.4: ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ವಿದರ್ಭ ತಂಡಕ್ಕೆ ಅಕ್ಷಯ್ ಕರ್ನೆವಾರ್ ಅಜೇಯ ಅರ್ಧಶತಕದ ಮೂಲಕ ನೆರವಾದರು. ಆ ಮೂಲಕ ವಿದರ್ಭ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದ ಪ್ರಥಮ ಇನಿಂಗ್ ್ಸನಲ್ಲಿ 312 ರನ್‌ಗಳ ಉತ್ತಮ ಮೊತ್ತ ಜಮೆ ಮಾಡಲು ನೆರವಾದರು. ಪ್ರತಿಯಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡ ಲೆಗ್ ಸ್ಪಿನ್ನರ್ ಆದಿತ್ಯ ಸರ್ವಾಟೆ ದಾಳಿಗೆ ಸಿಲುಕಿ 158 ರನ್‌ಗೆ 5 ವಿಕೆಟ್ ಕಳೆದುಕೊಂಡಿದೆ. ಇನಿಂಗ್ಸ್ ಮುನ್ನಡೆಗೆ ಇನ್ನೂ 154 ರನ್ ಗಳಿಸಬೇಕಿದೆ ಸೌರಾಷ್ಟ್ರ.
ಇಲ್ಲಿಯ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ದ್ವಿತೀಯ ದಿನದಾಟವಾದ ಸೋಮವಾರ 7 ವಿಕೆಟ್‌ಗೆ 200 ರನ್‌ಗಳೊಂದಿಗೆ ವಿದರ್ಭ ತನ್ನ ಪ್ರಥಮ ಇನಿಂಗ್ಸ್ ಮುಂದುವರಿಸಿತು. ರವಿವಾರ ಕ್ರೀಸ್ ಕಾಯ್ದುಕೊಂಡಿದ್ದ ಅಕ್ಷಯ್ ವಾಖರೆ(34) ಹಾಗೂ ಅಕ್ಷಯ್ ಕರ್ನೆವಾರ್(ಅಜೇಯ 73) ಸೋಮವಾರ ಇನಿಂಗ್ಸ್ ಆರಂಭಿಸಿದರು.
ಇವರಿಬ್ಬರೂ 8ನೇ ವಿಕೆಟ್‌ಗೆ ಬರೋಬ್ಬರಿ 78 ರನ್ ಗಳಿಸುವ ಮೂಲಕ ವಿದರ್ಭಕ್ಕೆ ಆಧಾರಸ್ತಂಭವಾದರು. ಅದರಲ್ಲೂ ವಿಶೇಷವಾಗಿ 160 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಮೂಲಕ ಅರ್ಧಶತಕದ ಗಡಿ ದಾಟಿದ ಕರ್ನೆವಾರ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಅಜೇಯರಾಗುಳಿದ ಕರ್ನೆವಾರ್‌ಗೆ ವಾಖರೆ ಉತ್ತಮ ಸಾಥ್ ನೀಡಿದರು. ಕೊನೆಯಲ್ಲಿ ಬಾಲಂಗೋಚಿ ಉಮೇಶ್ ಯಾದವ್ 13 ರನ್ ಕಾಣಿಕೆ ನೀಡಿ ಆತಿಥೇಯರು 300ರ ಗಡಿ ದಾಟಲು ನೆರವಾದರು. ಸೌರಾಷ್ಟ್ರದ ನಾಯಕ ಜೈದೇವ್ ಉನಾದ್ಕತ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ವಿದರ್ಭದ ಇನಿಂಗ್ಸ್‌ಗೆ ಉತ್ತರವಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಹರ್ವಿಕ್ ದೇಸಾಯಿ(10) ಸರ್ವಾಟೆ ಎಸೆತದಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದು ವಿದರ್ಭ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾದರು. 72 ಎಸೆತಗಳನ್ನು ಎದುರಿಸಿದ ವಿಶ್ವರಾಜ್ ಜಡೇಜ(18) ಅಲ್ಪಮೊತ್ತಕ್ಕೆ ಸರ್ವಾಟೆಗೆ ಎರಡನೇ ಬಲಿಯಾದರು.
ಈ ಹಂತದಲ್ಲಿ ತಂಡಕ್ಕೆ ಆಸರೆಯಾಗಿರುವ ವಿಕೆಟ್ ಕೀಪರ್ ಸ್ನೆಲ್ ಪಟೇಲ್(ಅಜೇಯ 87) ಸೌರಾಷ್ಟ್ರಕ್ಕೆ ಇನಿಂಗ್ಸ್ ಮುನ್ನಡೆ ಗಳಿಸಿಕೊಡಲು ಶ್ರಮಿಸುತ್ತಿದ್ದಾರೆ. ಒಂದೆಡೆ ವಿಕೆಟ್ ಪತನ ಗೊಳ್ಳುತ್ತಿದ್ದರೂ ಕ್ರೀಸ್‌ಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಮತ್ತೊಂದೆಡೆ ಟೂರ್ನಿಯಾದ್ಯಂತ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿರುವ ಅರ್ಪಿತ್ ವಸವದಾ (13) ಹಾಗೂ ಶೆಲ್ಡನ್ ಜಾಕ್ಸನ್(9) ವಾಖರೆ ಎಸೆತದಲ್ಲಿ ಅಲ್ಪಮೊತ್ತಕ್ಕೆ ನಿರ್ಗಮಿಸಿದ್ದು ಸೌರಾಷ್ಟ್ರ ತಂಡದಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿತು. ಆ ಬಳಿಕ ಪ್ರೇರಕ್ ಮಂಡಕ್( ಅಜೇಯ 16) ಹೆಚ್ಚಿನ ಕುಸಿತವಾಗದಂತೆ ತಡೆದು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಂಡಕ್‌ಸೌರಾಷ್ಟ್ರದ ಇನಿಂಗ್ಸ್ ಮುನ್ನಡೆಯ ಕನಸನ್ನು ನನಸು ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಇನ್ನೂ ಮೂರು ದಿನದ ಆಟ ಬಾಕಿಯಿದ್ದು ಸ್ಪಷ್ಟ ಫಲಿತಾಂಶ ಸಿಗುವ ನಿರೀಕ್ಷೆಯಿದೆ.
ಚೇತೇಶ್ವರ ಪೂಜಾರ ವೆಫಲ್ಯ
ಭಾ ರೀ ಭರವಸೆ ಮೂಡಿಸಿದ್ದ, ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಸೌರಾಷ್ಟ್ರದ ಗೆಲುವಿಗೆ ಕಾರಣವಾಗಿದ್ದ ರಾಷ್ಟ್ರೀಯ ತಂಡದ ಆಟಗಾರ ಚೇತೇಶ್ವರ ಪೂಜಾರ 11 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿ ಆದಿತ್ಯ ಸರ್ವಾಟೆ ಎಸೆತದಲ್ಲಿ ವಸೀಂ ಜಾಫರ್‌ಗೆ ಕ್ಯಾಚ್ ನೀಡಿ ಸೌರಾಷ್ಟ್ರ ಪಾಳಯದಲ್ಲಿ ನಿರಾಶೆಗೆ ಕಾರಣರಾದರು. ಸೌರಾಷ್ಟ್ರ ತಂಡವು ಅವರನ್ನು ಹೆಚ್ಚಾಗಿ ಅವಲಂಬಿಸದಿದ್ದರೂ ಪಂದ್ಯಕ್ಕೆ ತಿರುವು ನೀಡಬಲ್ಲ ದಾಂಡಿಗನಾಗಿದ್ದಾರೆ ಪೂಜಾರ.







