ಸ್ಟಾರ್ಕ್ ಮಿಂಚು: ಆಸೀಸ್‌ಗೆ ಸರಣಿ ವಿಜಯ

ಕ್ಯಾನ್‌ಬೆರಾ, ಫೆ.4: ವೇಗಿ ಮಿಚೆಲ್ ಸ್ಟಾರ್ಕ್ ಅವರ ಅಮೋಘ 5 ವಿಕೆಟ್ ಗೊಂಚಲು ನೆರವಿನಿಂದ ಆಸ್ಟ್ರೇಲಿಯ ತಂಡ ದ್ವಿತೀಯ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡವನ್ನು 366 ರನ್‌ಗಳ ಭಾರೀ ಅಂತರದಿಂದ ಮಣಿಸಿದೆ. ಈ ಮೂಲಕ 2-0 ಅಂತರ ದಿಂದ ಸರಣಿಯನ್ನು ಗೆದ್ದು ಸಂಭ್ರಮಿಸಿದೆ.
ಆಸ್ಟ್ರೇಲಿಯ ನೀಡಿದ 516 ರನ್‌ಗಳ ಅಸಾಧಾರಣ ಗೆಲುವಿನ ಗುರಿ ಬೆನ್ನಟ್ಟಿದ್ದ ಲಂಕಾ ನಾಲ್ಕನೇ ದಿನವಾದ ಸೋಮವಾರ ವಿಕೆಟ್ ನಷ್ಟವಿಲ್ಲದೆ 17 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿ 149 ರನ್‌ಗಳಿಗೆ ಆಲೌಟ್ ಆಯಿತು.2ನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾದ 5 ವಿಕೆಟ್ ಕಬಳಿಸಿದ ಸ್ಟಾರ್ಕ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ ತಮ್ಮದಾಗಿಸಿಕೊಂಡರು. ಆ ಮೂಲಕ ಲಂಕಾ ದಹನಕ್ಕೆ ಕಾರಣರಾದರು. ಪ್ರಥಮ ಇನಿಂಗ್ಸ್‌ನಲ್ಲಿ 534 ರನ್‌ಗಳ ಬೃಹತ್ ಮೊತ್ತ ಗಳಿಸಿದ್ದ ಕಾಂಗರೂ ಪಡೆ ಶ್ರೀಲಂಕಾವನ್ನು 215 ರನ್‌ಗಳಿಗೆ ಆಲೌಟ್ ಮಾಡಿತ್ತು. ಆ ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್ 196 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ವೇಳೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಶ್ರೀಲಂಕಾದ ದ್ವಿತೀಯ ಇನಿಂಗ್ಸ್ ನಲ್ಲಿ ಕುಸಾಲ್ ಮೆಂಡಿಸ್(42),ಲಹಿರು ತಿರಿಮನ್ನೆ (30) ಹಾಗೂ ವಿಕೆಟ್ ಕೀಪರ್ ರೋಶನ್ ಡಿಕ್ವೆಲ್ಲಾ (27) ಅಲ್ಪ ಪ್ರತಿರೋಧ ತೋರಿದರು. ಅಂತಿಮವಾಗಿ ಲಂಕಾ ಸೋಲೊಪ್ಪಿಕೊಳ್ಳಬೇಕಾಯಿತು.ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದು ಸ್ಟಾರ್ಕ್‌ಗೆ ಸಾಥ್ ನೀಡಿದರು.





