ಅಮೆರಿಕದಿಂದ ವಾಪಸಾದ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಫೆ.5:ಎರಡು ವಾರಗಳ ಹಿಂದೆ ಉತ್ತರಪ್ರದೇಶ(ಉತ್ತರ)ದಲ್ಲಿ ಪಕ್ಷದ ಉಸ್ತುವಾರಿಯ ಜೊತೆಗೆ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಪ್ರಿಯಾಂಕಾ ಗಾಂಧಿ ಸೋಮವಾರ ಅಮೆರಿಕದಿಂದ ವಾಪಸಾಗಿದ್ದಾರೆ. ಅವರು ಅಮೆರಿಕಕ್ಕೆ ಖಾಸಗಿ ಭೇಟಿ ನೀಡಿದ್ದರು.
ಅಮೆರಿಕದಿಂದ ಬಂದ ತಕ್ಷಣ ತನ್ನ ಸಹೋದರ ಹಾಗೂ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಯುಪಿ ಕಾಂಗ್ರೆಸ್ ಘಟಕ ಪ್ರಿಯಾಂಕಾ ಆಗಮನವನ್ನು ನಿರೀಕ್ಷಿಸುತ್ತಿದ್ದರೂ, ಅಲ್ಲಿಗೆ ತೆರಳುವ ಮೊದಲು ಅವರು ರಾಹುಲ್ ಗಾಂಧಿ ಫೆ.5 ರಂದು ದಿಲ್ಲಿಯಲ್ಲಿ ಕರೆದಿರುವ ಎಐಸಿಸಿ ರಾಜ್ಯ ಮ್ಯಾನೇಜರ್ಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಫೆ.9 ರಂದು ರಾಜ್ಯ ಮುಖ್ಯಸ್ಥರ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಿಯಾಂಕಾ ಅವರು ಪಕ್ಷದ ಪರ ಅಧಿಕೃತವಾಗಿ ಹೆಚ್ಚು ತೊಡಗಿಸಿಕೊಳ್ಳಲಿದ್ದಾರೆ. ಆ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ರಣನೀತಿಗೆ ಅಂತಿಮ ರೂಪ ನೀಡುವ ಸಾಧ್ಯತೆಯಿದೆ