ಮಂಗಳೂರು: ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ಬೀಗ ಹಾಕಿದ ಪಾಲಿಕೆ

ಮಂಗಳೂರು, ಫೆ. 5: ವಾಣಿಜ್ಯ ತೆರಿಗೆ ಪಾವತಿಸದೆ ಕಾರ್ಯಾಚರಿಸುತ್ತಿದ್ದ ನಗರದ ಹಲವು ಮಳಿಗೆಗಳಿಗೆ ಇಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ ನಿಯಮ ಉಲ್ಲಂಘಿಸಿದ ಅಂಗಡಿ ಮಾಲಕರಿಗೆ ನೋಟೀಸು ಜತೆಗೆ ಎಚ್ಚರಿಕೆಯನ್ನೂ ನೀಡಲಾಯಿತು.
ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ರಾಮಭವನ ಕಾಂಪ್ಲೆಕ್ಸ್‌ನ ಹಲವು ಅಂಗಡಿಗಳು, ಅತ್ತಾವರ, ಕಾಸಾ ಗ್ರೌಂಡ್ ಮತ್ತಿತರ ಕಡೆ ದಾಳಿ ನಡೆಸಲಾಗಿದೆ. ಕೆಲವು ಅಂಗಡಿಗಳು ಟ್ರೇಡ್ ಲೈಸನ್ಸ್ ಇಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇವುಗಳಿಗೆ ಬೀಗ ಹಾಕಲಾಯಿತು.
ನಗರದ ಕೆಲವು ಫ್ಲ್ಯಾಟ್‌ಗಳಲ್ಲಿ ನೀರಿನ ತೆರಿಗೆಯನ್ನೂ ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಅತ್ತಾವರ ಕಾಸಾ ಗ್ರೌಂಡ್‌ನಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಪ್ರತಿ ವಾರ ರೈಡ್
ಟ್ರೇಡ್ ಲೈಸನ್ಸ್ ಉಲ್ಲಂಘನೆಯ ಕುರಿತಂತೆ ಪ್ರತಿ ವಾರ ನಗರದಲ್ಲಿ ಪಾಲಿಕೆಯ ತಂಡ ಕಾರ್ಯಚರಣೆ ಕೈಗೊಳ್ಳಲಿದೆ. ಯಾರೂ ಕೂಡ ತೆರಿಗೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಲೈಸನ್ಸ್ ಇಲ್ಲದೆ ವ್ಯಾಪಾರ ವಹಿವಾಟು ನಡೆಸುವುದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಬಾಕಿ ತೆರಿಗೆ ಪಾವತಿಗೆ ಒಂದು ವಾರ ಗಡುವು
ನಿಯಮ ಉಲ್ಲಂಘಿಸಿದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಉದ್ದಿಮೆ ಪರವಾನಿಗೆ ನವೀಕರಣ ಮಾಡಿಕೊಳ್ಳುವುದರೊಂದಿಗೆ ಸೂಕ್ತ ತೆರಿಗೆಯನ್ನು ಪಾವತಿಸಬೇಕು. ತೆರಿಗೆ ಪಾವತಿಸದ ಹಲವು ಮಳಿಗೆಗಳಿಗೆ ಈಗಾಗಲೇ ನೊಟೀಸ್ ನೀಡಲಾಗಿದೆ. ನೋಟೀಸು ನೀಡಲಾದ ಸಂಸ್ಥೆಗಳು ಒಂದು ವಾರದೊಳಗೆ ತೆರಿಗೆ ಪಾವತಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಎಚ್ಚರಿಸಿದ್ದಾರೆ.







