ವಿಶ್ವಾಸಮತ ಯಾಚನೆ ಅಗತ್ಯವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ. 5: ತಮ್ಮ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಭದ್ರವಾಗಿದ್ದು, ವಿಶ್ವಾಸಮತಯಾಚನೆ ಮಾಡುವ ಯಾವುದೇ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂಬ ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡರು ಯಾವುದೋ ಲೋಕದಲ್ಲಿದ್ದು, ಆ ಲೋಕದಲ್ಲಿಯೇ ಅವರು ಮೈತ್ರಿ ಸರಕಾರವನ್ನು ವಿಹರಿಸಿಕೊಂಡಿರಲಿ. ನಾನು ನನ್ನ ಪಾಡಿಗೆ ಕೆಲಸ ಮಾಡುತ್ತೇನೆ ಎಂದ ಕುಮಾರಸ್ವಾಮಿ, ಮೈತ್ರಿ ಸರಕಾರ ಸುಭದ್ರವಾಗಿದ್ದು, ವಿಶ್ವಾಸಮತ ಯಾಚನೆ ಮಾಡುವ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದರು.
ಬಿಜೆಪಿ ಮುಖಂಡರದ್ದು ಒಳ್ಳೆಯ ಕೆಲಸಕ್ಕೆ ಅಡ್ಡಿಪಡಿಸುವ ಪ್ರಯತ್ನ. ಉತ್ತಮ ಬಜೆಟ್ ಮೂಲಕ ಒಳ್ಳೆಯ ಆಡಳಿತ ನೀಡಬೇಕೆಂದು ನಾನು ಪ್ರಯತ್ನಿಸುತ್ತಿದ್ದೇನೆ. ರಥ ಎಳೆಯುವಾಗ ಯಡೆಮಟ್ಟೆಯನ್ನು ಕೊಟ್ಟು ಅಡ್ಡಹಾಕುವಂತೆ ಬಿಜೆಪಿಯವರು ಒಳ್ಳೆ ಕೆಲಸ ಮಾಡಲು ಹೊರಟಿರುವ ನಮಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು...
‘ಬಿಜೆಪಿ ನಾಯಕರ ಯಾವುದೇ ಪ್ರಯತ್ನಗಳು ಯಾವುದೇ ಫಲ ನೀಡುವುದಿಲ್ಲ. ನಾಳೆಯಿಂದ ಪರದೆ ತೆರೆಯಲಿದೆ. ಮಾಧ್ಯಮ ಪ್ರತಿನಿಧಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸಲಿವೆ. ಕಾಂಗ್ರೆಸ್ ಶಾಸಕರು ಹಾಜರಾಗುತ್ತಾರೋ ಇಲ್ಲವೋ, ಅತೃಪ್ತರು ಬರುತ್ತಾರೋ ಇಲ್ಲವೋ ಎಂಬ ಎಲ್ಲ ಗೊಂದಲಗಳು ನಿವಾರಣೆಯಾಗುತ್ತವೆ’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ







