ಆಹಾರ ವಿಜ್ಞಾನ: ಫೆ.8ರಿಂದ ಆಳ್ವಾಸ್‍ನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಮೂಡುಬಿದಿರೆ, ಫೆ. 5: ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೋಷಣೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಆಶ್ರಯದಲ್ಲಿ ಫೆ.8 ಮತ್ತು 9ರಂದು 'ಆಹಾರ ಭದ್ರತೆ ಕಾರ್ಯವಿಧಾನಗಳು,ಪೋಷಕಾಂಶಗಳು-ಅಗತ್ಯ, ಪ್ರಸ್ತುತತೆ, ಸವಾಲುಗಳು ಹಾಗೂ ಆಯಾಮಗಳು' ಕುರಿತಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ಸಂಕಿರಣದ ಮುಖ್ಯ ಸಂಯೋಜಕಿ, ಆಳ್ವಾಸ್ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ಮುಖ್ಯಸ್ಥೆ ಡಾ.ಅರ್ಚನಾ ಪ್ರಭಾತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಘಾಟನ ಸಮಾರಂಭದಲ್ಲಿ ಶ್ರೀಲಂಕಾದ ಅಮರ್ ರಾಜ್ ಸಿಂಗ್ ಆಶಯ ಭಾಷಣ ಮಾಡಲಿದ್ದಾರೆ.
ಡಾ. ಎಂ. ಮೋಹನ ಆಳ್ವರು ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿ.ವಿ. ವೈಸ್ ಚಾನ್ಸೆಲರ್ ಪ್ರೊ. ಈಶ್ವರ ಪಿ., ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಆಳ್ವಾಸ್‍ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್ ಭಾಗವಹಿಸಲಿದ್ದಾರೆ. ಶನಿವಾರ ಮಧ್ಯಾಹ್ನ ಉದ್ಯಮಿ ರಾಹುಲ್ ಕಾಮತ್ ಕೆದಿಂಜೆ ಸಮಾರೋಪ ಭಾಷಣ ಮಾಡಲಿದ್ದು ಮಂ.ವಿ.ವಿ. ಕುಲಸಚಿವ ಡಾ. ಎ. ಎಂ. ಖಾನ್, ಆಳ್ವಾಸ್ ಟ್ರಸ್ಟಿ ವಿವೇಕ ಆಳ್ವ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಫೆ.8ರಂದು ಥಾಯ್ಲೆಂಡ್‍ನ ಡಾ.ಸೂಟ್ಟಾವಟ್ ಬೆಂಜಕುಲ್ (ಸಾಗರೋತ್ಪನ್ನ ಸಂಸ್ಕರಣೆಯಲ್ಲಿ ಉಷ್ಣರಹಿತ ತಾಂತ್ರಿಕತೆ), ತಮಿಳ್ನಾಡು ಪೆರಿಯಾರ್ ವಿ.ವಿ.ಯ ಪ್ರೊ. ಡಾ. ಪಿ. ನಝ್ನಿ (ಆರೋಗ್ಯದಾಯಕ ಸಿರಿಧಾನ್ಯಗಳು), ಬಾಂಗ್ಲಾ ದೇಶದ ಆಹಾರ ಸಂರಕ್ಷಣ ಪ್ರಾಧಿಕಾರದ ಸದಸ್ಯ ಪ್ರೊ. ಡಾ. ಇಕ್ಬಾಲ್ ರವೂಫ್ ಮಾಮುನ್ (ಬಾಂಗ್ಲಾದೇಶದಲ್ಲಿ ಆಹಾರ ಸಂರಕ್ಷಣೆಗಾಗಿರುವ ಕಾನೂನುಗಳು, ಗುಣಮಟ್ಟ ಮಾಪನಗಳು), ಕೋಡೆಕ್ಸ್ ಇಂಡಿಯಾದ ಅಧ್ಯಕ್ಷ ಸಂಜಯ್ ದವೆ (ಆಹಾರ ಉದ್ಯಮ ಪ್ರವರ್ಧನೆಯಲ್ಲಿ ಭಾರತೀಯ ಆಹಾರ ನಿಬಂಧನೆಗಳು), ಹಿಮಾಲಯ ಡ್ರಗ್ ಕಂಪೆನಿಯ ಪೂರ್ಣಿಮಾ ಶಂಕರ್ (ನ್ಯೂಟ್ರಾಸ್ಯೂಟಿಕಲ್ಸ್ ನಲ್ಲಿ ಸಿಹಿ-ಇತ್ತೀಚಿನ ಬೆಳವಣಿಗೆಗಳು), ಫೆ.9ರಂದು ಶ್ರೀಲಂಕಾದ ಪೋಷಕಾಂಶ ತಜ್ಞೆ ನಿಲುಷಿ ಮುದಲಿಗೆ (ಅಸುರಕ್ಷಿತ ಆಹಾರ-ರೋಗಗಳಿಗೆ ಚಾಲಕ), ಮುಂಬೈಯ ಇಂಟೆಗ್ರೇಟೆಡ್ ಫುಡ್ ಪಾರ್ಕ್‍ನ ಸಿಇಒ ಸಂಜಯ್ ಮುಲ್ಪಾನಿ (ಭಾರತದಲ್ಲಿ ಆಹಾರ ಬಳಕೆ ಮತ್ತು ಸಂಸ್ಕರಣೆಯಲ್ಲಿ ಮಾದರಿ ಬದಲಾವಣೆಗಳು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿರುವರು.
ಸಮಿತಿ ಸದಸ್ಯರಾದ ಆಶಿತಾ ಎಂ.ಡಿ. ಮತ್ತು ಡಾ.ನವೀನ್ ಕುಮಾರ್ ವಿ. ಉಪಸ್ಥಿತರಿದ್ದರು.







