ರಾಮಾಯಣ ಜಾನಪದ ಮಹಾಕಾವ್ಯ: ಲಕ್ಷ್ಮೀಶ ತೋಳ್ಪಾಡಿ

ಉಡುಪಿ, ಫೆ.5: ಕ್ರೌಂಚ ಪಕ್ಷಿಯ ಘಟನೆ ನಡೆಯದಿದ್ದರೆ ರಾಮಾಯಣ ಕಾವ್ಯ ಬರುತ್ತಿರಲಿಲ್ಲ. ರಾಮಾಯಣ ಜಾನಪದದಿಂದ ಬಂದಿರುವ ಮಹಾ ಕಾವ್ಯ ಎಂದು ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ಸೋಮವಾರ ಆಯೋಜಿಸ ಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೇದ, ಉಪನಿಷತ್ತು ಬರೆದ ನಂತರ ರಾಮಾಯಣ ಬರೆಯಲಾಯಿತು. ವೇದ ಉಪನಿಷತ್ತಿನಲ್ಲಿ ಕಾವ್ಯದ ವಿಭಾಗ ಇದೆ. ಹಾಗಾಗಿ ರಾಮಾಯಣ ಬರೆಯುವ ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಯಾರಿಗೆ ಸ್ವಂತ ಚಿಂತೆಗಿಂತ ಲೋಕದ ಚಿಂತೆ ಕಾಡುತ್ತಿರುತ್ತದೆಯೋ ಅವನನ್ನು ತಪಸ್ವಿ ಎನ್ನ ಬಹುದು. ವಾಲ್ಮೀಕಿಗೂ ಲೋಕದ ಚಿಂತೆ ಕಾಡಿತ್ತು ಎಂದರು.
ಮನಸ್ಸಿಗೆ ನಿಜವಾದ ಹೊಡೆತ ಬೀಳದೆ ಅದರೊಳಗೆ ಏನೆಲ್ಲ ಸಾಮರ್ಥ್ಯ ಇದೆ ಎಂಬುವುದು ಪ್ರಕಟವಾಗುವುದಿಲ್ಲ. ರಾಮಾಯಣದಿಂದ ಮನಸ್ಸು ಎಷ್ಟು ಬೇಕಾದರೂ ನೋವು ಸಹಿಸಿಕೊಳ್ಳುತ್ತದೆ ಎಂಬ ಅಂಶ ತಿಳಿಯುತ್ತದೆ. ಹಲವು ರೀತಿಯ ಒತ್ತಡಗಳು ಮನಸ್ಸಿನ ಸಹಜ ಗುಣಗಳಾಗಿವೆ. ಹಿಂದಿನಿಂದಲೂ ಇದೇ ರೀತಿ ಇದ್ದ ಮನುಷ್ಯನ ಮನಸ್ಸಿನ ಸ್ವಭಾವ ಬದಲಾಗುವುದಿಲ್ಲ ಎಂದರು.
ತೀವ್ರವಾದ ನೋವಿನಿಂದ ಮನಸ್ಸಿನೊಳಗಿರುವ ಶಕ್ತಿ ಪ್ರಕಟವಾಗುತ್ತದೆ. ವಾಲ್ಮೀಕಿ ಕೂಡ ಮನಸ್ಸಿನ ಒತ್ತಡಕ್ಕೆ ಒಳಗಾಗಿದ್ದಾರೆ. ಇಲ್ಲದಿದ್ದರೆ ಅವರಿಗೆ ನೇರವಾಗಿ ರಾಮಾಯಣ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಸ್ವತಃ ವಾಲ್ಮೀಕಿಯೇ ರಾಮಾಯಣದಲ್ಲಿ ಉಲ್ಲೇಖಿಸಿದ್ದಾರೆ. ವಾಲ್ಮೀಕಿ ತಪಸ್ವಿಯಾಗಿದ್ದ ರಿಂದ ಅವನಲ್ಲಿ ಕರುಣ ರಸ ಹುದುಗಿತ್ತು. ಅದಿಲ್ಲದಿದ್ದರೆ ರಾಮಾಯಣ ಸೃಷ್ಟಿಯಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ವೀರ ಹಾಗೂ ಶೃಂಗಾರ ರಸ ಎಂಬುದು ವೇದ ಕಾಲ ಸೇರಿದಂತೆ ಎಲ್ಲ ಕಾಲದಲ್ಲಿಯೂ ಇದೆ. ಈ ಎರಡು ರಸಗಳನ್ನು ತಾಂತ್ರಿಕತೆಯ ಮೂಲಕ ಲಯ ಬದ್ಧವಾಗಿ ಸತತವಾಗಿ ಅನುಸರಣೆ ಮಾಡಿದಾಗ ಇನ್ನೊಂದು ರಸ ಇರುವುದು ತಿಳಿಯುತ್ತದೆ. ಆ ರಸ ಪ್ರಕಟವಾದಾಗ ಅದನ್ನು ಅನುಸಾರ ಮಾಡಿ ಕೃತಾರ್ಥ ರಾಗಬೇಕು ಎಂದು ಅವರು ಹೇಳಿದರು.
ಇಂದು ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಗಳಿಗೆ ಎಲ್ಲವೂ ಗೊತ್ತಿದೆ ಎಂಬ ಅಹಂ ಇದೆ. ಇದು ತಾಳಮದ್ದಲೆಯ ಅರ್ಥಗಾರಿಕೆಗೆ ದೊಡ್ಡ ಪೆಟ್ಟು. ಗೊತ್ತಿಲ್ಲದ್ದನ್ನು ಹುಡುಕುವ ಕಾರ್ಯ ಮಾಡಬೇಕು ಎಂದು ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯ ಪಟ್ಟರು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ನಾರಾಯಣ ಎಂ. ಹೆಗಡೆ, ಶೃಂಗೇಶ್ವರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.







