ತೇಲ್ ತುಂಬ್ಡೆಯನ್ನು ಫೆ. 12ರವರೆಗೆ ಬಂಧಿಸಲ್ಲ: ಹೈಕೋರ್ಟ್‌ಗೆ ತಿಳಿಸಿದ ಪುಣೆ ಪೊಲೀಸರು

ಪುಣೆ, ಫೆ. 5: ಫೆಬ್ರವರಿ 12ರ ರಾತ್ರಿವರೆಗೆ ದಲಿತ ಚಿಂತಕ ಆನಂದ್ ತೇಲ್ ತುಂಬ್ಡೆ ಅವರನ್ನು ಬಂಧಿಸುವುದಿಲ್ಲ ಎಂದು ಪುಣೆ ಪೊಲೀಸರು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮಂಗಳವಾರ ತಿಳಿಸಿದ್ದಾರೆ.
ರಾಜ್ಯದ ವಕೀಲ ಅರುಣ್ ಪೈ ಪುಣೆ ಪೊಲೀಸರನ್ನು ಪ್ರತಿನಿಧಿಸಿ ನ್ಯಾಯಮೂರ್ತಿ ಎನ್.ಡಬ್ಲು. ಸಾಂಬ್ರೆ ಪೀಠದ ಮುಂದೆ ಈ ಹೇಳಿಕೆ ನೀಡಿದ್ದಾರೆ. ಎಲ್ಗಾರ್ ಪರಿಷತ್-ಬೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ತೇಲ್ ತುಂಬ್ಡೆ ಸಲ್ಲಿಸಿದ ಮನವಿ ವಿರೋಧಿಸಿ ಅಫಿದಾವಿತ್ ದಾಖಲಿಸಲು ಸಮಯಾವಕಾಶದ ಪೂರ್ವ ಶರತ್ತಾಗಿ ಮುಚ್ಚಳಿಕೆ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
2018 ಜನವರಿ 1ರಂದು ಪುಣೆಯ ಸಮೀಪದ ಬೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ತೇಲ್ ತುಂಬ್ಡೆ ಆರೋಪಿಯಾಗಿದ್ದರು. ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸಹಿತ ಹಲವು ಆರೋಪಗಳನ್ನು ದಾಖಲಿಸಲಾಗಿತ್ತು. ಕಳೆದ ವಾರ ಬಂಧನಕ್ಕೊಳಗಾಗಿದ್ದ ತೇಲ್ ತುಂಬ್ಡೆ ಅವರನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿ ಸಲಾಗಿತ್ತು. ಬಂಧನದಿಂದ ರಕ್ಷಣೆ ಕೋರಿ ಅವರು ಉಚ್ಚ ನ್ಯಾಯಾಲಯ ಸಂಪರ್ಕಿಸಿದ್ದರು. ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ಪ್ರತಿಪಾದಿಸಿ ತೇಲ್ ತುಂಬ್ಡೆ ಅವರು ತನ್ನ ವಕೀಲ ಮಿಹಿರ್ ದೇಸಾಯಿ ಮೂಲಕ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ಯುಎಎಪಿಎ ಕಲಂ 43ಡಿ (4) ತಡೆ ವಿಧಿಸುತ್ತದೆ. ಆದುದರಿಂದ ತೇಲ್ತುಂಬ್ಡೆ ಅವರ ಮನವಿ ತಿರಸ್ಕರಿಸಬೇಕು ಎಂದು ಪೈ ನ್ಯಾಯಮೂರ್ತಿ ಸಂಬಾರೆ ಅವರಲ್ಲಿ ಮನವಿ ಮಾಡಿದ್ದರು.