3 ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಸೋರಿಕೆ ಮೂಲ ಮಣಿಪಾಲ್ ಪ್ರಿಂಟಿಂಗ್ ಪ್ರೆಸ್

ಬೆಂಗಳೂರು, ಫೆ.5: ಪಿಎಸ್ಸೈ, ಪೊಲೀಸ್ ಪೇದೆ ಹಾಗೂ ಬಿಎಂಟಿಸಿ ಕಂ ನಿರ್ವಾಹಕ ನೇಮಕಾತಿ ಸಂಬಂಧ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಮಣಿಪಾಲ್ ಟೆಕ್ನಾಲಜೀಸ್ ಯೂನಿಟ್-1 ಪ್ರಿಂಟಿಂಗ್ ಪ್ರೆಸ್‌ನಿಂದ ಸೋರಿಕೆ ಆಗಿದ್ದವು ಎನ್ನುವ ಮಾಹಿತಿ ಸಿಸಿಬಿ ತನಿಖೆಯಿಂದ ಗೊತ್ತಾಗಿದೆ.
ಪ್ರಿಂಟಿಂಗ್ ಪ್ರೆಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಪ್ರಕರಣ ಆರೋಪಿ ಅನಿಲ್ ಫ್ರಾನ್ಸಿಸ್ ಎಂಬಾತನೇ ಸೋರಿಕೆ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಆತನನ್ನು ಎರಡು ದಿನಗಳ ಹಿಂದೆ ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪು ಬಾಯಿಬಿಟ್ಟಿದ್ದ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
ವಿವಿಧ ಸರಕಾರಿ ಹುದ್ದೆಗಳ ನೇಮಕಾತಿ ಸಂಬಂಧ ಪ್ರಶ್ನೆ ಪತ್ರಿಕೆಗಳನ್ನು ಮಣಿಪಾಲ್ ಟೆಕ್ನಾಲಜೀಸ್ ಯೂನಿಟ್-1ನಲ್ಲಿ ಮುದ್ರಣ ಮಾಡಲಾಗುತ್ತದೆ. ಇದನ್ನು ತಿಳಿದ ಅನಿಲ್, ಹೊಂಚು ಹಾಕಿ, ಪ್ರಶ್ನೆ ಪತ್ರಿಕೆಗಳನ್ನು ಕಳವು ಮಾಡುತ್ತಿದ್ದ. ಬಳಿಕ, ಜೆರಾಕ್ಸ್ ಮಾಡಿಸಿಕೊಂಡು ಪ್ರಮುಖ ಆರೋಪಿಗಳಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಪೊಲೀಸ್ ಪ್ರಧಾನ ಕಚೇರಿಯ ಕಂಟ್ರೋಲ್ ರೂಮ್ ವಿಭಾಗದ ಎಸ್ಸೈ ನಾಗರಾಜು, ಪೇದೆ ರಮೇಶ್‌ಮಳ್ಳಿ, ಹಲಸೂರು ಸಂಚಾರ ಠಾಣೆಯ ಪೇದೆ ವಿಠಲ್ ಬ್ಯಾಕೋಡ್ ಹಾಗೂ ಇಳಕಲ್ ಪುರಸಭೆ ಕಂದಾಯ ಅಧಿಕಾರಿ ನಾಮದೇವ ಅಣ್ಣು ಲಮಾಣಿ, ವಿಜಯಪುರ ಜಿಲ್ಲೆಯ ಓತಿಹಾಳ್ ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಭೀಮ್‌ಸಿಂಗ್ ಶಂಕರ್ ರಾಥೋಡ್, ಜಿಗಣಿ ಬಿಎಂಟಿಸಿ ಘಟಕದ ಡಿಪೋ ನೌಕರ ಸೋಮಪ್ಪಯಮನಪ್ಪ.
ಸರಕಾರಿ ಶಾಲೆ ಶಿಕ್ಷಕ ಸಂಜೀವ್ ದೊಡ್ಡಮನಿ, ಪಿಡಿಒ ಮಹೇಶ್ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಯ್ಯ ಯಾನೆ ಗುರೂಜಿ, ಈತನ ಆಪ್ತರಾದ ಈರಮಲ್ಲಪ್ಪ, ತುಮಕೂರಿನ ಸಿ.ಟಿ.ಬಸವರಾಜು, ದಾವಣಗೆರೆಯ ಅಮೀರ್ ಅಹ್ಮದ್ ಸೇರಿ 150 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 67.73 ಲಕ್ಷ ರೂ. ನಗದು, ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆಯ 98 ನಕಲು ಪ್ರತಿಗಳು, 138 ಅಭ್ಯರ್ಥಿಗಳ ಪ್ರವೇಶ ಪತ್ರ, 35 ಅಭ್ಯರ್ಥಿಗಳ ಅಸಲಿ ದಾಖಲೆಗಳು, 36 ಮೊಬೈಲ್, 17 ವಾಹನ, ಎರಡು ಪ್ರಿಂಟರ್, ಒಂದು ಲ್ಯಾಪ್‌ಟಾಪ್ ಹಾಗೂ ಒಂದು ಟ್ಯಾಬ್, ಖಾಲಿ ಚೆಕ್‌ಗಳನ್ನು ಜಪ್ತಿ ಮಾಡಲಾಗಿದೆ.







