ಉಡುಪಿ: ಪಲಿಮಾರು ಮಠದಿಂದ ಶ್ರೀಮಧ್ವರಾಜೋತ್ಸವ
ಉಡುಪಿ, ಫೆ.5: ಪರ್ಯಾಯ ಪಲಿಮಾರು ಮಠದ ವತಿಯಿಂದ ಇಂದಿನಿಂದ ಫೆ.17ರವರೆಗೆ ಲೋಕ ಕಲ್ಯಾಣಾರ್ಥ ಹಾಗೂ ಭಾರತೀಯ ಸನಾತನ ಧರ್ಮ, ಸಂಸ್ಕೃತಿ, ಸಾಹಿತ್ಯ ಹಾಗೂ ಸಮಾಜಗಳ ರಕ್ಷಣೆಗಾಗಿ ಶ್ರೀಮಧ್ವರಾಜೋತ್ಸವ ನಡೆಯಲಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ತಿಳಿಸಿದ್ದಾರೆ.
ಇದರಲ್ಲಿ 9 ದಿನಗಳ ಕಾಲ 24 ವಿದ್ವಾಂಸರಿಂದ 24 ಗಂಟೆಗಳ ಕಾಲ ಅಖಂಡ ವಿವಿಧ ಗ್ರಂಥಗಳ ಪಾರಾಯಣ ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ಫೆ.5ರಿಂದ 14ರವರೆಗೆ ನಡೆಯಲಿದೆ ಎಂದರು.
ಫೆ.7ರಿಂದ ಫೆ.14ರವರೆಗೆ ಪ್ರತಿದಿನ ಸಂಜೆ 5:30ರಿಂದ 7 ರವರೆಗೆ ರಾಜಾಂಗಣದಲ್ಲಿ ವಿದ್ವಾಂಸರಿಂದ ತ್ರೈಲೋಕ್ಯಗುರು ಮಹಿಮೆ ಉಪನ್ಯಾಸ ಮಾಲಿಕೆ ನಡೆಯಲಿದೆ. ಫೆ.12ರಂದು ರಾಜಾಂಗಣದಲ್ಲಿ ವಿಶೇಷ ವಾಚನ- ಪ್ರವಚನ ನಡೆಯಲಿದೆ. 13ರಂದು ಶ್ರೀಕೃಷ್ಣನಾಮ ಜಪದ ಸಮರ್ಪಣೆ, ಫೆ.14ರಂದು ಮಧ್ವನವಮಿ ಪ್ರಯುಕ್ತ ಶ್ರೀಮಧ್ವಾಚಾರ್ಯ ವಿರಚಿತ ಸರ್ವಮೂಲ ಗ್ರಂಥ ಹಾಗೂ ಶ್ರೀಮ್ನಮಧ್ವಾಚಾರ್ಯರ ಶೋಭಾಯಾತ್ರೆ ನಡೆಯಲಿದೆ.
ಫೆ.15ರಂದು ಅಪರಾಹ್ನ 3ಗಂಟೆಗೆ ಭಾರತ ಸುಕ್ಷೇಮಾರ್ಥ ವಿಶಿಷ್ಟ ಯಾಗ, ವಿಪ್ರ ಮಹಿಳೆಯರಿಂದ ಸಾಮೂಹಿಕ ಶ್ರೀಲಕ್ಷ್ಮೀ ಶೋಭಾನೆ ಪಠಣ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪಲಿಮಾರುಶ್ರೀ ತಿಳಿಸಿದರು.
ಫೆ.16ರ ಬೆಳಗ್ಗೆ 5ಗಂಟೆಯಿಂದ 16ರ ಮುಂಜಾನೆ 5ಗಂಟೆಯವರೆಗೆ ಅಖಂಡ 24 ಗಂಟೆಗಳ ಕಾಲ ರಾಜಾಂಗಣದಲ್ಲಿ ಶ್ರೀಮದ್ಭಾಗವತ ಪುರಾಣ ಪ್ರವಚನ ಒಟ್ಟು 16ಮಂದಿ ಪೀಠಾಧಿಪತಿಗಳಿಂದ ನಡೆಯಲಿದೆ. 17ರಂದು ಬೆಳಗ್ಗೆ 10ರಿಂದ ಅಪರಾಹ್ನ 1ರವರೆಗೆ ರಾಜಾಂಗಣದಲ್ಲಿ ‘ಸಾವಿರ ಭಾರತ ರಸೋತ್ತರ’ ಮಹಾಭಾರತ ಕುರಿತು ಸಾವಿರ ರಸಪ್ರಶ್ನೋತ್ತರ ಕಾರ್ಯಕ್ರಮವಿದೆ. ಅಲ್ಲದೇ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಅಪರಾಹ್ನ 12ರಿಂದ 3ರವರೆಗೆ ಸಮೂಹ ಗಾನ, ನೃತ್ಯ, ಕಿರುನಾಟಕ ಮುಂತಾದ ಸ್ಪರ್ಧಾ ಕಾರ್ಯಕ್ರಮವಿದೆ.
ಅದೇ ದಿನ ಅಪರಾಹ್ನ 3 ರಿಂದ ಸುವರ್ಣ ರಥದಲ್ಲಿ ಶ್ರೀಮದ್ಭಾಗವತ ಹಾಗೂ ಸರ್ವಮೂಲಗ್ರಂಥಗಳ ಉತ್ಸವ, ರಜತ ರಥದಲ್ಲಿ ಶ್ರೀವಾದಿರಾಜರ ಉತ್ಸವ ನಡೆಯಲಿದೆ ಎಂದು ಶ್ರೀವಿದ್ಯಾಮಾನ್ಯತೀರ್ಥ ಸ್ವಾಮೀಜಿ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಶ ಕಡೆಕಾರು, ಡಾ.ಕೋರ್ಲಹಳ್ಳಿ ವೆಂಕಟೇಶ ಆಚಾರ್ಯರು ಉಪಸ್ಥಿತರಿದ್ದರು.







