ಶತಮಾನದ ಕೊನೆಯ ಹೊತ್ತಿಗೆ ಕರಗಲಿದೆ ಹಿಮಾಲಯದ ಮೂರನೇ ಒಂದು ಭಾಗ

ವಾಶಿಂಗ್ಟನ್, ಫೆ. 5: ಹವಾಮಾನ ಬದಲಾವಣೆಯಿಂದಾಗಿ ಈ ಶತಮಾನದ ಕೊನೆಯ ಹೊತ್ತಿಗೆ ಹಿಂದೂ ಕುಶ್ ಹಿಮಾಲಯ ಪರ್ವತ ಶ್ರೇಣಿಯ ಕನಿಷ್ಠ ಮೂರನೇ ಒಂದು ಭಾಗದಷ್ಟು ಹಿಮ ಕರಗುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಅನಿಲಗಳ ಹೊರಹೊಮ್ಮುವಿಕೆಯನ್ನು ತಡೆಯಲು ಸಕ್ರಿಯವಾಗಿ ಪ್ರಯತ್ನಿಸಿದರೂ, ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿಗಳನ್ನು ಸಂಪೂರ್ಣವಾಗಿ ಸಾಧಿಸಿದ ಹೊರತಾಗಿಯೂ ಇದು ಸಂಭವಿಸುತ್ತದೆ.
ಹೆಚ್ಚುತ್ತಿರುವ ಉಷ್ಣತೆಯು ಹಿಂದೂ ಕುಶ್ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ 8 ದೇಶಗಳಿಗೆ ಗಂಭೀರ ಬೆದರಿಕೆಯಾಗಿದೆ ಎಂದು ಸೋಮವಾರ ರಾತ್ರಿ ಬಿಡುಗಡೆ ಮಾಡಲಾದ ವರದಿ ಹೇಳಿದೆ. ಅವುಗಳೆಂದರೆ ಭಾರತ, ಚೀನಾ, ಮ್ಯಾನ್ಮಾರ್, ನೇಪಾಳ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭೂತಾನ್.
ಈ ವಲಯದ ನೀರ್ಗಲ್ಲುಗಳಿಂದ 10 ಪ್ರಮುಖ ನದಿಗಳಿಗೆ ಸಿಹಿ ನೀರು ಹರಿಯುತ್ತದೆ ಹಾಗೂ ಅದು ಸುಮಾರು 190 ಕೋಟಿ ಜನರ ಕುಡಿಯುವ ನೀರು, ನೀರಾವರಿ ಮತ್ತು ವಿದ್ಯುತ್ ಅಗತ್ಯಗಳನ್ನು ಈಡೇರಿಸುತ್ತದೆ.
‘‘ಜಾಗತಿಕ ತಾಪಮಾನದ ಪರಿಣಾಮಗಳು ಭಯಾನಕವಾಗಿರುತ್ತವೆ. ನಾವು ಗಾಬರಿಗೊಂಡಿದ್ದೇವೆ’’ ಎಂದು ಅಧ್ಯಯನದ ಲೇಖಕರ ಪೈಕಿ ಓರ್ವರಾಗಿರುವ ಫಿಲಿಪಸ್ ವೆಸ್ಟರ್ ಹೇಳುತ್ತಾರೆ.
ಅವರು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿರುವ ಅಂತರ್‌ರಾಷ್ಟ್ರೀಯ ಏಕೀಕೃತ ಪರ್ವತ ಅಭಿವೃದ್ಧಿ ಕೇಂದ್ರದ ಮುಖ್ಯ ವಿಜ್ಞಾನಿಯಾಗಿದ್ದಾರೆ.







