ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕ್ರಮ: ಸಚಿವ ರಹೀಂ ಖಾನ್

ಮಂಗಳೂರು, ಫೆ. 5: ಬೆಂಗಳೂರಿನಲ್ಲಿ ಕ್ರೀಡಾ ವಿಶ್ವ ವಿದ್ಯಾನಿಲಯ ಸ್ಥಾಪನೆ ಪ್ರಸ್ತಾವನೆಯು ಉನ್ನತ ಶಿಕ್ಷಣ ಇಲಾಖೆಯ ಮುಂದಿದೆ. ಉನ್ನತ ಶಿಕ್ಷಣ ಇಲಾಖೆಯ ವರದಿ ಬಂದ ಬಳಿಕ ಮಂದಿನ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಹೇಳಿದರು.
ದ.ಕ.ಜಿಲ್ಲಾ ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಕ್ರೀಡಾಸಕ್ತರು ಮತ್ತು ತರಬೇತುದಾರರೊಡನೆ ಮಾತುಕತೆ ನಡೆಸಿ ಕ್ರೀಡಾಂಗಣ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ 150 ಲಕ್ಷ ರೂ.ವೆಚ್ಚದಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಸಚಿವ ರಹೀಂ ಖಾನ್ ಕ್ರೀಡಾ ಹಾಸ್ಟೆಲ್‌ಗಳಿಗೆ ತರಬೇತುದಾರರ ನೇಮಕ, ಗುಣಮಟ್ಟದ ಆಹಾರ ಪೂರೈಕೆ, ಬಾಲಕ ಬಾಲಕಿಯರ ಪ್ರತ್ಯೇಕ ಹಾಸ್ಟೇಲ್ ಸಹಿತ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ 500 ಕೋ.ರೂ. ಒದಗಿಸುವಂತೆ ಬಜೆಟ್ ಪೂರ್ವಸಭೆಯಲ್ಲಿ ಸರಕಾರಕ್ಕೆ ಬೇಡಿಕೆ ಮಂಡಿಸಲಾಗಿದೆ ಎಂದರು.
ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್ ಸಮಗ್ರ ಕ್ರೀಡಾಂಗಣ ಅಭಿವೃದ್ಧಿಗೆ 3.35 ಕೋ.ರೂ. ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರೀಡಾ ಇಲಾಖೆ ಅನುದಾನ ಬಳಸಿ ಮಾಡುವ ಕಾಮಗಾರಿ ಅನಿವಾರ್ಯ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಈ ಸಂದರ್ಭ ಕ್ರೀಡಾ ಇಲಾಖೆಯ ಅನುದಾನ ಲೋಪವಾಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಸಚಿವರನ್ನು ಶಾಸಕರು ವಿನಂತಿಸಿದರಲ್ಲದೆ ಎಮ್ಮೆಕೆರೆಯನ್ನು ಅಂತಾರಾಷ್ಟ್ರೀಯ ಈಜುಕೊಳವನ್ನಾಗಿಸಲು ಅನುದಾನದ ಅಗತ್ಯವಿದೆ ಎಂದರು.
ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಕ್ರೀಡಾ ಹಾಸ್ಟೆಲ್‌ನಲ್ಲಿ ಕಬ್ಬಡಿ ಕ್ರೀಡಾಳುಗಳ ವಾಸ್ತವ್ಯಕ್ಕೆ ಅವಕಾಶ ಹಾಗೂ ಬಂಟ್ವಾಳದ ಬೆಂಜನಪದನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದ್ದು ಅನುದಾನ ಬಿಡುಗಡೆಗೆ ಕೋರಿದರಲ್ಲದೆ ಕ್ರೀಡಾಂಗಣ ನಿರ್ವಹಣೆಗೆ ಸಂಪನ್ಮೂಲ ಕೊರತೆ ಇರುವುದನ್ನು ಸಚಿವರ ಗಮನಕ್ಕೆ ತಂದರು. ನೆಹರೂ ಮೈದಾನದಲ್ಲಿ ಫುಟ್‌ಬಾಲ್ ಅಂಗಣ ಅಭಿವೃದ್ಧಿಗೆ ಸರಕಾರ 100 ಲಕ್ಷ ರೂ.ಗಳಿಗೆ ಮಂಜೂರಾತಿ ನೀಡಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಕಾರ್ಯಪ್ರಗತಿ ಸ್ಥಗಿತಗೊಂಡಿದ್ದು, ಯೋಜನೆಯನ್ನು ಪರಿಷ್ಕರಿಸಿ 125 ಲಕ್ಷ ರೂ.ಗಳ ಮಂಜೂರಾತಿಗೆ ಅನುಮೋದನೆ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ, ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ್ ಭಂಡಾರಿ ಹಾಗೂ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.







