ರೋಗ ಹರಡವಿಕೆಯನ್ನು ನರಹತ್ಯೆ ಪ್ರಕರಣವಾಗಿ ಪರಿಗಣಿಸಬಹುದೇ
ರಾಜ್ಯ ಅಡ್ವೋಕೇಟ್ ಜನರಲ್ ಸಹಿತ ನಾಲ್ವರಿಗೆ ಹೈಕೋರ್ಟ್ ಸಲಹೆ

ಬೆಂಗಳೂರು, ಫೆ.5: ಎಚ್‌ಐವಿಗಿಂತಲೂ ಅಪಾಯಕಾರಿ ಎನ್ನಲಾದ ಹರ್ಪೆಸ್ ಸಿಂಪ್ಲೆಕ್ಸ್ ವೈರಸ್ (ಎಚ್‌ಎಸ್‌ವಿ) ಎಂಬ ರೋಗವನ್ನು ಪತಿಯು ಪತ್ನಿಗೆ ಹರಡಿದ್ದಾರೆ ಎನ್ನಲಾದ ಅತಿ ಅಪರೂಪದ ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ವ್ಯಕ್ತಿಯೊಬ್ಬ ತನಗಿರುವ ಎಚ್‌ಎಸ್‌ವಿ ರೋಗವನ್ನು ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು? ಹೀಗೆ ಜೀವಕ್ಕೆ ಅಪಾಯಕಾರಿಯಾದ ರೋಗ ಹರಡುವ ಕೃತ್ಯವನ್ನು ನರಹತ್ಯೆಗೆ ಪ್ರಯತ್ನಿಸಿದ ಪ್ರಕರಣವಾಗಿ ಪರಿಗಣಿಸಲು ಸಾಧ್ಯವಿದೆಯೇ? ಎಂಬ ಬಗ್ಗೆ ಸೂಕ್ತ ಕಾನೂನಾತ್ಮಕ ಸಲಹೆ ನೀಡುವಂತೆ ರಾಜ್ಯ ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂದೇಶ್ ಚೌಟ, ಹೈಕೊರ್ಟ್ ಪ್ಲೀಡರ್ ರಾಚಯ್ಯ ಮತ್ತು ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ಅವರಿಗೆ ಸೂಚಿಸಿದೆ.
ಅಲ್ಲದೆ ಗುಣಮುಖವಾಗದ ಮತ್ತು ಮಾರಣಾಂತಿಕ ರೋಗ ಹರಡುವುದನ್ನು ಸಾಮಾಜಿಕ ಹತ್ಯೆ (ಸೋಸಿಯಲ್ ಡೆತ್) ಎಂಬುದಾಗಿಯೂ ಪರಿಗಣಿಸಲು ಸಾಧ್ಯವಿದೆಯೇ? ಈ ರೀತಿಯ ಪ್ರಕರಣಗಳ ಸಂಬಂಧ ದೇಶದಲ್ಲಿರುವ ವೈದ್ಯಕೀಯ ಹಾಗೂ ಕಾನೂನಾತ್ಮಕ ಅಂಶಗಳೇನು? ಎಂಬುದರ ಕುರಿತು ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಬೇಕು ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಸೂಚಿಸಿದ್ದಾರೆ.
ಮದುವೆಗೆ ಮುನ್ನ ಎಚ್‌ಎಸ್‌ವಿ ರೋಗ ನನ್ನ ಪತಿಗೆ ಇತ್ತು. ಈ ವಿಚಾರವನ್ನು ತಿಳಿಸದೆ ನನ್ನನ್ನು ಮದುವೆಯಾದರು. ಆ ವಿಚಾರ ಆತನ ಪೋಷಕರು ಹಾಗೂ ಕುಟುಂಬ ಸದಸ್ಯರಿಗೆ ತಿಳಿದಿತ್ತು. ಮದುವೆಯಾದ ನಂತರ ನಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕ ಬೆಳೆದ ಕಾರಣ ನನಗೂ ಎಚ್‌ಎಸ್‌ವಿ ರೋಗ ತಗುಲಿತು. ಹೀಗಾಗಿ ಪತಿ ಹಾಗೂ ಆತನ ಕುಟುಂಬ ಸದಸ್ಯರು ನನಗೆ ವಂಚಿಸಿದ್ದಾರೆ. ಜೀವನಪರ್ಯಂತ ನರಳುವಂತೆ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ, ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ಮಹಿಳೆಯ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ನರಹತ್ಯೆಗೆ ಯತ್ನಿಸಿದ, ಜೀವಕ್ಕೆ ಅಪಾಯಕಾರಿಯಾದ ರೋಗ ಹರಡಿದ, ವಂಚಿಸಿದ, ಕೌಟುಂಬಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ, ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಪ್ರಕರಣವೆಂದು ವಿಚಾರಣೆಗೆ ಅಂಗೀಕರಿಸಿ ಸಮನ್ಸ್ ಜಾರಿ ಮಾಡಿತ್ತು. ಅಧೀನ ನ್ಯಾಯಾಲಯದ ಈ ಆದೇಶ ರದ್ದುಪಡಿಸುವಂತೆ ಕೋರಿ ಪತಿ ಹಾಗೂ ಆತನ ಕುಟುಂಬ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮೇಲಿನಂತೆ ಸೂಚನೆ ನೀಡಿದೆ.
ಎಚ್‌ಎಸ್‌ವಿ ಎಂದರೇನು
ಎಚ್‌ಎಸ್‌ವಿ ಎಂಬುದು ಸಾಂಕ್ರಾಮಿಕ ರೋಗ. ಬಾಯಿ ಹಾಗೂ ಸ್ಪರ್ಶದಿಂದ ಹರಡುತ್ತದೆ. ಒಮ್ಮೆ ಈ ರೋಗ ಬಂದರೆ ಗುಣಮುಖವಾಗುವುದಿಲ್ಲ. ಎಚ್‌ಐವಿಗಿಂತಲೂ ಜೀವಕ್ಕೆ ಅತ್ಯಂತ ಅಪಾಯಕಾರಿ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೂ ರೋಗ ಹರಡುತ್ತದೆ. ರೋಗಬಂದರೆ ಖಾಸಗಿ ಭಾಗಗಳಲ್ಲಿ ಅತಿಯಾದ ನೋವು ಹಾಗೂ ತುರಿಕೆ ಕಾಣಿಸಿಕೊಳ್ಳುತ್ತದೆ. ಮೈಯಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ದೇಹ ಸದಾ ಸುಸ್ತಾಗುವ ಈ ರೋಗದ ಪ್ರಮುಖ ಗುಣಲಕ್ಷಣಗಳು.







