ದಿ. ಜಾರ್ಜ್ ಫೆರ್ನಾಂಡಿಸ್‌ಗೆ ಶ್ರದ್ಧಾಂಜಲಿ

ಮಂಗಳೂರು, ಫೆ.5: ಕೇಂದ್ರದ ಮಾಜಿ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಅವರಿಗೆ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ವತಿಯಿಂದ ಶ್ರದ್ಧಾಂಜಲಿ ಸಭೆಯು ಮಂಗಳವಾರ ನಗರ ಬಿಜೈ ಚರ್ಚ್ ಹಾಲ್‌ನಲ್ಲಿ ಜರುಗಿತು.
ಮಂಗಳೂರು ಬಿಷಪ್ ಅ.ವಂ. ಪೀಟರ್ ಪಾವ್ಲ್ ಸಲ್ಡಾನ ಮಾತನಾಡಿ ದಿ. ಜಾರ್ಜ್ ಫೆರ್ನಾಂಡಿಸ್ ಮಂತ್ರಿ ಪದವಿ ಪಡೆದರೂ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಕಾರ್ಮಿಕರ ಪರವಾಗಿದ್ದ ಅವರು ಧೀಮಂತ ನಾಯಕರು. ಅವರ ಆದರ್ಶಗಳನ್ನು ಇಂದಿನ ತಲೆಮಾರು ಪಾಲಿಸಬೇಕು ಎಂದು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಮಾತನಾಡಿ, ಸಮಾಜಸೇವೆಯೇ ತನ್ನ ಗುರಿ ಎಂಬ ಧ್ಯೇಯದೊಂದಿಗೆ ಸಮಾಜಕ್ಕಾಗಿ ತನ್ನನ್ನು ಅರ್ಪಿಸಿದ ಜಾರ್ಜ್ ಫೆರ್ನಾಂಡಿಸ್ ನಡೆದ ದಾರಿ ಎಲ್ಲರಿಗೂ ದಾರಿದೀಪವಾಗಲಿ ಎಂದರು.
ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕಲ್ ಫೆರ್ನಾಂಡಿಸ್, ಶ್ರೀ ಜಯಕೃಷ್ಣ ಸಮಿತಿ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಪೆಲಿಕ್ಸ್ ಡಿಸೋಜ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ಧರ್ಮಕ್ಷೇತ್ರದ ಪಾಲನಾ ಪರಿಷತ್ ಕಾರ್ಯದರ್ಶಿ ಎಂ. ಪಿ. ನೊರೊನ್ಹಾ ಮತ್ತಿತರರು ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ರೊಲ್ಫಿ ಡಿಸೋಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜ ವಂದಿಸಿದರು.
ಪುತ್ಥಳಿ ನಿರ್ಮಾಣಕ್ಕೆ ಪ್ರಯತ್ನ
ಕೆಥೋಲಿಕ್ ಸಭಾದ ವತಿಯಿಂದ ಸಿದ್ಧಪಡಿಸಲಾದ ಠರಾವನ್ನು ಕೆಥೋಲಿಕ್ ಸಭಾದ ಖಜಾಂಚಿ ವಿವಿಡ್ ಡಿಸೋಜ ವಾಚಿಸಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಠರಾವು ಸ್ವೀಕರಿಸಿದರು.
ಬಳಿಕ ಮಾತನಾಡಿದ ಐವನ್ ಡಿಸೋಜ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರಿಸಲು ಮತ್ತು ಬಿಜೈ ವೃತ್ತದಲ್ಲಿ ಜಾರ್ಜ್ ಫೆರ್ನಾಂಡಿಸ್ ಪುತ್ಥಳಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.







