ಹೊಸದಿಲ್ಲಿಯಲ್ಲಿ ಕಿರುಕುಳ: 24 ಗಂಟೆಯಲ್ಲಿ ಭಾರತದಿಂದ ಹಿಂದಿರುಗಿದ ವಿದೇಶಿ ಮಹಿಳೆ

ಹೊಸದಿಲ್ಲಿ, ಫೆ. 5: ದೇಶದಲ್ಲಿ ಕಿರುಕುಳಕ್ಕೆ ಒಳಗಾದ ಬೆಲ್ಜಿಯಂ ಪ್ರವಾಸಿ ಮಹಿಳೆಯೋರ್ವರು 24 ಗಂಟೆಯ ಒಳಗಡೆ ತನ್ನ ದೇಶಕ್ಕೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಲ್ಜಿಯಂಗೆ ಹಿಂದಿರುಗಿದ ಬಳಿಕ ಮಹಿಳೆ ಈ ಬಗ್ಗೆ ಬೆಲ್ಜಿಯಂ ದೂತವಾಸ ಕಚೇರಿಗೆ ಪತ್ರ ಬರೆದಿದ್ದಾರೆ. ದೂತವಾಸದ ಕಚೇರಿ ಈ ದೂರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿದೆ. ಅನಂತರ ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆಲ್ಜಿಯಂ ದೂತವಾಸ ಕಚೇರಿಗೆ ಮಹಿಳೆ ಇಮೇಲ್ ಮಾಡಿದ ದೂರಿನಲ್ಲಿ, “ನಾನು ಡಿಸೆಂಬರ್ 6ರಂದು ಸಂಜೆ 4 ಗಂಟೆಗೆ ದಿಲ್ಲಿಯಲ್ಲಿ ಬಂದಿಳಿದೆ” ಎಂದು ತಿಳಿಸಿದ್ದಾರೆ. “ದಿಲ್ಲಿ ತಲುಪಿದ ಬಳಿಕ ಸಿಮ್ ಕಾರ್ಡ್ ತೆಗೆದುಕೊಂಡೆ. ಹೊಸದಿಲ್ಲಿ ರೈಲ್ವೆ ನಿಲ್ದಾಣದಿಂದ ರಿಕ್ಷಾ ಹಿಡಿದು ಮಿಂಟೋ ರಸ್ತೆಗೆ ತೆರಳಿದೆ. ಆದರೆ ರಿಕ್ಷಾ ಚಾಲಕ ನನ್ನನ್ನು ಅಲ್ಲಿಗೆ ತಲುಪಿಸುವ ಬದಲು ಇಬ್ಬರು ವ್ಯಕ್ತಿಗಳ ಮುಂದೆ ತಂದು ನಿಲ್ಲಿಸಿದ. ಅವರು ‘ಪೊಲೀಸ್ ಗುರುತಿನ ಚೀಟಿ’ ತೋರಿಸಿದರು. ‘‘ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆ ತಡೆ ಮಾಡಲಾಗಿದೆ’’ ಎಂದು ಅವರು ಹೇಳಿದ್ದರು. ನಾನು ಮುಂದುವರಿಯಲು ಟೂರಿಸ್ಟ್ ಪೊಲೀಸರಿಂದ ಪರವಾನಿಗೆ ಪಡೆಯಬೇಕಿತ್ತು. ಅಟೋ ರಿಕ್ಷಾ ಚಾಲಕ ನನ್ನನ್ನು ಕೆಲವೇ ನಿಮಿಷಗಳ ಬಳಿಕ ಸಮವಸ್ತ್ರ ಧರಿಸಿದ ಆರು ಮಂದಿಯ ಮುಂದೆ ತಂದು ನಿಲ್ಲಿಸಿದ. ಅವರು ‘‘ನೀವು ತಲುಪಲು ಬಯಸುವ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ’’ ಎಂದು ಹೇಳಿದರು. ನಾನು ಕೂಡಲೇ ಹೊಸದಿಲ್ಲಿಯಿಂದ ಹಿಂದಿರುಗಿದೆ” ಎಂದು ಮಹಿಳೆ ಇಮೇಲ್‌ನಲ್ಲಿ ಆರೋಪಿಸಿದ್ದಾರೆ.





