ಕುಸಿಯುತ್ತಿರುವ ಜನಸಂಖ್ಯೆಗೆ ವಿಚಿತ್ರ ಕಾರಣ ತಿಳಿಸಿದ ಜಪಾನ್ ಉಪ ಪ್ರಧಾನಿ

ಟೋಕಿಯೋ, ಫೆ.5: ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ವಿವಾದ ಸೃಷ್ಟಿಸುವುದರಲ್ಲಿ ನಿಸ್ಸೀಮರಾಗಿರುವ ಜಪಾನ್ ದೇಶದ ಉಪ ಪ್ರಧಾನಿ ತಾರೊ ಅಸೊ ಈ ಬಾರಿ ದೇಶದ ಕುಸಿಯುತ್ತಿರುವ ಜನಸಂಖ್ಯೆಗೆ ಮಹಿಳೆಯರನ್ನು ದೂರಿ ವಿವಾದಕ್ಕೀಡಾಗಿದ್ದಾರೆ.
ದೇಶದ ವಿತ್ತ ಸಚಿವರೂ ಆಗಿರುವ ಅಸೊ, ನೈಋತ್ಯ ಜಪಾನ್ ನ ಫುಕೂವೋಕೊ ನಗರದಲ್ಲಿ ಸಭೆಯಲ್ಲಿ ಮಾತನಾಡುತ್ತಾ “ಹೆಚ್ಚಿನವರು ಹಿರಿಯ ನಾಗರಿಕರನ್ನು ಈ ಸಮಸ್ಯೆಗೆ ಅನಗತ್ಯವಾಗಿ ದೂರುತ್ತಿದ್ದಾರೆ, ಇದು ತಪ್ಪು, ಮಕ್ಕಳಿಗೆ ಜನ್ಮ ನೀಡದವರು ಇದಕ್ಕೆ ಕಾರಣ'' ಎಂದು ಅವರು ಹೇಳಿದ್ದರು.
ಮಕ್ಕಳನ್ನು ಪಡೆಯಲು ಬಯಸಿದ್ದರೂ ಮಕ್ಕಳಾಗದ ದಂಪತಿಗೆ ಅಸೊ ಅವರ ಅಸಂವೇದಿತನದ ಹೇಳಿಕೆಯಿಂದ ನೋವುಂಟಾಗಿದೆ ಎಂದು ವಿಪಕ್ಷದ ಸಂಸದರು ದೂರಿದ ನಂತರ ಅಸೊ ತಮ್ಮ ಹೇಳಿಕೆ ವಾಪಸ್ ಪಡೆದಿದ್ದಾರೆ.
ನಂತರ 78 ವರ್ಷದ ಉಪ ಪ್ರಧಾನಿ ಸಮಜಾಯಿಷಿ ನೀಡುತ್ತಾ ಮಾಧ್ಯಮ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದೆ ಹಾಗೂ ತಾನು ಕುಸಿಯುತ್ತಿರುವ ಜನನ ಪ್ರಮಾಣದಿಂದ ಜಪಾನ್ ದೇಶದ ಆರ್ಥಿಕತೆಗೆ ಒದಗಬಹುದಾದ ಸಮಸ್ಯೆಯತ್ತ ಬೆಳಕು ಚೆಲ್ಲಲು ಯತ್ನಿಸಿದ್ದಾಗಿ ಹೇಳಿದ್ದಾರೆ.
ಜಪಾನ್ ಜನಸಂಖ್ಯೆ 2018ರಲ್ಲಿ 4,48,000ರಷ್ಟು ಕುಸಿದಿರುವುದು ಹಾಗೂ ಜನನ ಪ್ರಮಾಣ ಕೂಡ 9,21,000ರಷ್ಟಿದ್ದ ಹಿನ್ನೆಲೆಯಲ್ಲಿ ಅಸೊ ಅವರ ಹೇಳಿಕೆ ಬಂದಿತ್ತು. ದೇಶದಲ್ಲಿನ ಜನನ ಪ್ರಮಾಣ ಕಳೆದ ವರ್ಷ ಒಂದು ಶತಮಾನದಲ್ಲೇ ಅತ್ಯಂತ ಕಡಿಮೆಯಾಗಿದೆ ಎನ್ನಲಾಗಿದೆ.







