ಮಂಗಳೂರು: ರೈಲು ಪ್ರಯಾಣಿನ ದರೋಡೆ ?: ಕ್ಷಣಾರ್ಧದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು
► ಘಟನೆಯ ಬಗ್ಗೆ ಸಂಶಯ ► ತನಿಖೆ ಆರಂಭಿಸಿದ ಪೊಲೀಸರು
ಮಂಗಳೂರು, ಫೆ.5: ನಗರದ ಕಂಕನಾಡಿ ರೈಲ್ವೆ ಜಂಕ್ಷನ್‌ನಿಂದ ಬರುತ್ತಿದ್ದ ಪ್ರಯಾಣಿಕರನ್ನು ಅಡ್ಡಗಟ್ಟಿ 5 ಲಕ್ಷ ರೂ. ದರೋಡೆಗೈದ ಘಟನೆ ಮಂಗಳವಾರ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಕ್ಷಣಾರ್ಧದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಂಗಳವಾರ ಬೆಳಗ್ಗೆ 4 ಮಂದಿಯ ತಂಡ ಮುಂಬೈಯಿಂದ ಮಂಗಳೂರಿಗೆ ಆಗಮಿಸಿದೆ. ಮೀನುಗಾರಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಇವರಲ್ಲಿದ್ದ 5 ಲಕ್ಷ ರೂ. ಹಣವನ್ನು ನಗರದ ವ್ಯಕ್ತಿಯೊಬ್ಬರಿಗೆ ತಲುಪಿಸಬೇಕಿತ್ತು ಎನ್ನಲಾಗಿದೆ. ಆದರೆ ವ್ಯಕ್ತಿಯೊಬ್ಬರು ಕರೆ ಮಾಡಿ ನೀವು ರಿಕ್ಷಾದಲ್ಲಿ ಪಂಪ್‌ವೆಲ್ ಕಡೆಗೆ ಬನ್ನಿ ಎಂದಿದ್ದು, ಅದರಂತೆ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಅಮರ್ ಆಳ್ವ ರಸ್ತೆ ಸಮೀಪ ತಾವೇರಾ ವಾಹನದಲ್ಲಿ ಬಂದ ನಾಲ್ವರ ತಂಡ ಏಕಾಏಕಿ ರಿಕ್ಷಾ ಅಡ್ಡಗಟ್ಟಿ 5ಲಕ್ಷ ರೂ. ಹಣ ಬ್ಯಾಗನ್ನು ದೋಚಿ ಪರಾರಿಯಾಗಿದೆ ಎನ್ನಲಾಗಿದೆ.
ಈ ಮಧ್ಯೆ ನಗರ ಠಾಣೆಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ‘ತಂಡವೊಂದು 5 ಲಕ್ಷ ರೂ.ವನ್ನು ದರೋಡೆ ಮಾಡಿ ಕಾರಿನಲ್ಲಿ ಪರಾರಿಯಾಗಿದೆ’ ಎಂದು ಹೇಳಿದ್ದಾನೆ. ಕೂಡಲೇ ಪೊಲೀಸರು ನಗರ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ. ಆದರೆ ಘಟನೆ ನಡೆದು ತುಂಬಾ ಹೊತ್ತಾದರೂ ಯಾರು ದೂರು ನೀಡಲು ಬರಲಿಲ್ಲ. ದರೋಡೆಗೊಳಗಾದ ತಂಡದ ಮತ್ತೊಬ್ಬ ವ್ಯಕ್ತಿ ನಗರ ಠಾಣೆಗೆ ಆಗಮಿಸಿ ಹಣ ದರೋಡೆಯಾದ ಬಗ್ಗೆ ದೂರು ನೀಡಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗಲೂ ಅಸ್ಪಷ್ಟ ಉತ್ತರ ಲಭಿಸಿದೆ.
ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಕಾರ್ಯಾಚರಣೆ ಆರಂಭಿಸಿದಾಗ ಠಾಣೆಗೆ ಬಂದ ಮೊಬೈಲ್ ಕರೆಯನ್ನು ಆಧರಿಸಿ ಅದರ ನೆಟ್‌ವರ್ಕ್ ಶೋಧ ನಡೆಸಿದಾಗ ಹೆಜಮಾಡಿಯಿಂದ ಉಡುಪಿಯತ್ತ ಕಾರು ತೆರಳುವುದು ಗಮನಕ್ಕೆ ಬಂದಿದೆ. ತಕ್ಷಣ ನಗರ ಪೊಲೀಸರು ಪೊಲೀಸರು ಕೂಡಲೇ ಉಡುಪಿ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತವೇರಾ ವಾಹನದ ತಪಾಸಣೆಗೆ ತೊಡಗಿ ಕಾಪು ಬಳಿ ವಾಹನವನ್ನು ತಡೆ ಹಿಡಿದಿದ್ದಾರೆ. ಬಳಿಕ ವಾಹನ ಮತ್ತು 4 ಮಂದಿಯನ್ನು ವಶಕ್ಕೆ ಪಡೆದು ಮಂಗಳೂರು ನಗರ ಪೊಲೀಸರಿಗೆ ಹಸ್ತಾಂತರಿಸಿದ್ದರು.
ರೈಲಿನಲ್ಲಿ ಬಂದ 4 ಮಂದಿ ಪ್ರಯಾಣಿಕರು ಹಿಂದಿ ಮಾತನಾಡುತ್ತಿದ್ದು, ಮಹಾರಾಷ್ಟ್ರದವರಾಗಿರಬಹುದೆಂದು ಸಂಶಯಿಸಲಾಗಿದೆ. ಉಡುಪಿಯಲ್ಲಿ ಸೆರೆಯಾದ 4 ಮಂದಿ ಭಟ್ಕಳದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







