ನ್ಯೂಝಿಲೆಂಡ್ ವಿರುದ್ಧ ಮತ್ತೊಂದು ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ
ಇಂದು ಮೊದಲ ಟ್ವೆಂಟಿ-20 ಪಂದ್ಯ

ವೆಲ್ಲಿಂಗ್ಟನ್, ಫೆ.5: ಏಕದಿನ ಸರಣಿಯನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಬುಧವಾರ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಒತ್ತಡಕ್ಕೆ ಸಿಲುಕಿರುವ ಆತಿಥೇಯ ನ್ಯೂಝಿಲೆಂಡ್ ವಿರುದ್ಧ ಭಾರತ ಮತ್ತೊಂದು ಸರಣಿ ಗೆಲ್ಲಬಲ್ಲ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.
ಭಾರತ ತಂಡ ನ್ಯೂಝಿಲೆಂಡ್ ನೆಲದಲ್ಲಿ ಇನ್ನಷ್ಟೇ ಟಿ-20 ಸರಣಿ ಗೆಲ್ಲಬೇಕಾಗಿದೆ. 2009ರಲ್ಲಿ ಕೊನೆಯ ಬಾರಿ ಕಿವೀಸ್‌ನಾಡಿನಲ್ಲಿ ಆಡಿದ್ದ ದ್ವಿಪಕ್ಷೀಯ ಟಿ-20 ಸರಣಿಯಲ್ಲಿ 0-2 ಅಂತರದಿಂದ ಸೋತಿತ್ತು. ಆ ಬಳಿಕ 2012ರಲ್ಲಿ ನಡೆದ 2 ಪಂದ್ಯಗಳ ಸರಣಿಯಲ್ಲಿ ಕಿವೀಸ್ 1-0 ಅಂತರದಿಂದ ಜಯ ಸಾಧಿಸಿತ್ತು. 2017-18ರಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ನ್ಯೂಝಿಲೆಂಡ್ 1-2 ಅಂತರದಿಂದ ಶರಣಾಗಿತ್ತು.
ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಕಾರಣ ರೋಹಿತ್ ಶರ್ಮಾ ಭಾರತದ ನಾಯಕತ್ವವಹಿಸಿದ್ದಾರೆ. ನ್ಯೂಝಿಲೆಂಡ್‌ನಲ್ಲಿ ಚೊಚ್ಚಲ ಟಿ-20 ಸರಣಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ. ಯುವ ವಿಕೆಟ್‌ಕೀಪರ್ ರಿಷಭ್ ಪಂತ್, ಆಲ್‌ರೌಂಡರ್ ಕೃನಾಲ್ ಪಾಂಡ್ಯ ಹಾಗೂ ಪಂಜಾಬ್ ವೇಗಿ ಸಿದ್ಧಾರ್ಥ್ ಕೌಲ್ ಟಿ-20 ತಂಡದಲ್ಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಸರಣಿಯಿಂದ ಹೊರಗುಳಿದಿದ್ದ ಹಿರಿಯ ಆಟಗಾರ ಎಂ.ಎಸ್. ಧೋನಿ ಟಿ-20 ತಂಡಕ್ಕೆ ವಾಪಸಾಗಿದ್ದಾರೆ. ಉತ್ತಮ ಫಿನಿಶರ್ ಆಗಿರುವ ದಿನೇಶ್ ಕಾರ್ತಿಕ್‌ಗೆ ಈ ಸರಣಿಯು ಉತ್ತಮ ಅವಕಾಶವಾಗಿದೆ. ಆದರೆ, ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಬಗ್ಗೆ ಖಚಿತತೆಯಿಲ್ಲ. ಐದನೇ ಏಕದಿನ ಪಂದ್ಯದಲ್ಲಿ 90 ರನ್ ಗಳಿಸಿರುವ ಅಂಬಟಿ ರಾಯುಡು ಮಧ್ಯಮ ಕ್ರಮಾಂಕದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
19ರ ಹರೆಯದ ಶುಭ್‌ಮನ್ ಗಿಲ್ ಏಕದಿನ ಸರಣಿಯ ಕೊನೆಯ 2 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದ್ದರೂ ಕೇವಲ 9 ಹಾಗೂ 7 ರನ್ ಗಳಿಸಿದ್ದರು. ಕೊಹ್ಲಿ ಅನುಪಸ್ಥಿತಿಯಲ್ಲಿ ಗಿಲ್ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ.
ಕಳೆದ 3 ಏಕದಿನ ಪಂದ್ಯಗಳಲ್ಲಿ ಮಿಂಚಲು ವಿಫಲವಾಗಿದ್ದ ಶಿಖರ್ ಧವನ್ ಟಿ-20 ಸರಣಿಯನ್ನು ಸ್ಮರಣೀಯವಾಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಟಿ-20ಯಲ್ಲಿ ಕಿವೀಸ್ ಕಳಪೆ ಸಾಧನೆ: ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಕಿವೀಸ್ ಟಿ-20ಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಆದರೆ, ಇತ್ತೀಚೆಗೆ ಟಿ-20 ಮಾದರಿಯಲ್ಲಿ ನ್ಯೂಝಿಲೆಂಡ್ ದಾಖಲೆ ಕಳಪೆಯಾಗಿದೆ. ಕಳೆದ 7 ಟಿ-20 ಸರಣಿಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ. ಕೆಲವೇ ದಿನಗಳ ಹಿಂದೆ ಯುಎಇನಲ್ಲಿ ಪಾಕ್ ವಿರುದ್ಧ ಸರಣಿಯಲ್ಲಿ ಕ್ವೀನ್‌ಸ್ವೀಪ್‌ಗೆ ಗುರಿಯಾಗಿತ್ತು. ಟಿ-20 ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದೆ.
ಪ್ರಸ್ತುತ ಭಾರತ ವಿರುದ್ಧ ಸರಣಿಯಲ್ಲಿ ಕಿವೀಸ್ ಅಗ್ರ ಕ್ರಮಾಂಕದ ಹಿರಿಯ ಆಟಗಾರ ಮಾರ್ಟಿನ್ ಗಪ್ಟಿಲ್ ಅನುಪಸ್ಥಿತಿಯಲ್ಲಿ ಆಡಲಿದೆ. ಹೀಗಾಗಿ ನಾಯಕ ಕೇನ್ ವಿಲಿಯಮ್ಸನ್ ಅವರು ಕಾಲಿನ್ ಮುನ್ರೊ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ವಿಲಿಯಮ್ಸನ್ 54 ಟಿ-20ಯಲ್ಲಿ 27 ಬಾರಿ ಇನಿಂಗ್ಸ್ ಆರಂಭಿಸಿದ್ದಾರೆ. ಗಪ್ಟಿಲ್‌ರಲ್ಲದೆ ಟ್ರೆಂಟ್ ಬೌಲ್ಟ್ ಕೂಡ ಟಿ-20 ಸರಣಿಯಲ್ಲಿ ಆಡುತ್ತಿಲ್ಲ.
►ಪಿಚ್ ಹಾಗೂ ಹವಾಗುಣ
ವೆಲ್ಲಿಂಗ್ಟನ್‌ನ ವೆಸ್ಟ್‌ಪ್ಯಾಕ್ ಸ್ಟೇಡಿಯಂ ಪಿಚ್ ನಿಗೂಢವಾಗಿದೆ. ಈ ಮೈದಾನದಲ್ಲಿ ಈ ಹಿಂದೆ ನಡೆದ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 196 ರನ್ ಗಳಿಸಿದ್ದ ನ್ಯೂಝಿಲೆಂಡ್ 12 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಪಂದ್ಯ ರಾತ್ರಿ ವೇಳೆ ನಡೆಯುತ್ತಿರುವ ಕಾರಣ ಮಂಜಿನ ಹನಿ ತನ್ನದೇ ಪಾತ್ರವಹಿಸಲಿದೆ.
ತಂಡಗಳು
►ಭಾರತ(ಸಂಭಾವ್ಯ): ರೋಹಿತ್ ಶರ್ಮಾ( ನಾಯಕ), ಶಿಖರ್ ಧವನ್, ಶುಭ್‌ಮನ್ ಗಿಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ/ಕೇದಾರ್ ಜಾಧವ್, ಭುವನೇಶ್ವರ ಕುಮಾರ್, ಖಲೀಲ್ ಅಹ್ಮದ್, ಯಜುವೇಂದ್ರ ಚಹಾಲ್/ಕುಲದೀಪ್ ಯಾದವ್.
►ನ್ಯೂಝಿಲೆಂಡ್(ಸಂಭಾವ್ಯ): ಕೇನ್ ವಿಲಿಯಮ್ಸನ್(ನಾಯಕ), ಕಾಲಿನ್ ಡಿ ಮುನ್ರೊ, ಟಿಮ್ ಸೆರ್ಫಟ್(ವಿ.ಕೀ.), ರಾಸ್ ಟೇಲರ್, ಜೇಮ್ಸ್ ನೀಶಾಮ್, ಕಾಲಿನ್ ಡಿ ಗ್ರಾಂಡ್‌ಹೊಮ್ಮೆ, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕಗ್ಗೆಲೆಜಿನ್, ಡಗ್ ಬ್ರೆಸ್‌ವೆಲ್, ಲಾಕಿ ಫರ್ಗ್ಯುಸನ್/ಟಿಮ್ ಸೌಥಿ, ಐಶ್ ಸೋಧಿ.
►ಪಂದ್ಯದ ಸಮಯ: ಮಧ್ಯಾಹ್ನ 12:30







