ಇರಾದಲ್ಲಿ ಕರಾಗೃಹ ಸ್ಥಳ ಪರಿಶೀಲಿಸಿದ ಎಡಿಜಿಪಿ

ಬಂಟ್ವಾಳ, ಫೆ. 5: ಬಂಟ್ವಾಳ ತಾಲೂಕಿನ ಇರಾ ಮತ್ತು ಕುರ್ನಾಡು ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇಂದ್ರ ಕಾರಾಗೃಹ ಮತ್ತು ಅಧಿಕಾರಿಗಳ ವಸತಿ ಸಮುಚ್ಚಯದ ಜಮೀನು ಮಂಗಳವಾರ ಪರಿಶೀಲಿಸಿದ ಎಡಿಜಿಪಿ ಎನ್.ಎಸ್.ಮೇಘರಿಕ್ ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದರು.
ಪ್ರಸ್ತುತ ಮಂಗಳೂರು ಕೆನರಾ ಕಾಲೇಜ್ ಪಕ್ಕದಲ್ಲಿರುವ ಹಳೆಯ ಕಾರಾಗೃಹ ಜಾಗದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಂಗಳೂರು ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ ಇರಾ ಮತ್ತು ಕುರ್ನಾಡು ಸಮೀಪದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ ನೀಡಿರುವ ಸುಮಾರು 64 ಎಕರೆ ಜಮೀನಿನಲ್ಲಿ 250 ಕೋ.ರೂ. ವೆಚ್ಚದಲ್ಲಿ ಒಂದು ಸಾವಿರ ಕೈದಿಗಳಿಗೆ ವ್ಯವಸ್ಥೆಯ ಸುಸಜ್ಜಿತ ಕಾರಾಗೃಹ ಮತ್ತು ಸಮೀಪದಲ್ಲಿ ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಪ್ರಥಮ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಜೈಲು ನಿರ್ಮಾಣದ ಬಳಿಕ ಎರಡನೇ ಹಂತದಲ್ಲಿ ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆಯೋಜನೆ ರೂಪಿಸಲಾಗಿದೆ. ಕಾರಾಗೃಹ ಮತ್ತು ವಸತಿ ಸಮುಚ್ಚಯದ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆಯ ಹಂತದಲ್ಲಿದೆ ಎಂದು ಎಡಿಜಿಪಿ ಮೇಘರಿಕ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಂ.ಲಕ್ಮೀ ಪ್ರಸಾದ್, ಡಿಸಿಪಿ ಉಮಾ, ಎಸಿಪಿ ಶ್ರೀನಿವಾಸ ಗೌಡ, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಚಂದನ್, ಪಿಡಬ್ಲೂಡಿ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಉಮೇಶ್ ಭಟ್, ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ, ಇರಾ ಪಂ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜರಿದ್ದರು.






.jpg)
.jpg)

