ಸರಣಿ ಜಯದತ್ತ ವನಿತೆಯರ ಚಿತ್ತ

ವೆಲ್ಲಿಂಗ್ಟನ್, ಫೆ.5: ನ್ಯೂಝಿಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳನ್ನು ಗೆದ್ದು ಮೂರನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತದ ವನಿತೆಯರು ಬುಧವಾರದಿಂದ ಆರಂಭವಾಗುವ ಟಿ20 ಸರಣಿಯಲ್ಲಿ ಮತ್ತೊಂದು ಸರಣಿ ಜಯಕ್ಕೆ ಕಾತರರಾಗಿದ್ದಾರೆ.
ಮಹಿಳಾ ಏಕದಿನ ಚಾಂಪಿಯನ್‌ಶಿಪ್‌ನ ಭಾಗವಾಗಿ ನಡೆಸಲಾದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ತಂಡ 2-1ರಿಂದ ಈಗಾಗಲೇ ವಶಪಡಿಸಿಕೊಂಡಿದೆ. ಏಕದಿನ ವಿಭಾಗದಲ್ಲಿ ಬ್ಯಾಟಿಂಗ್‌ನಲ್ಲಿ ಅವಕಾಶ ದೊರೆಯದ ಕಾರಣ ಹೆಚ್ಚಿನ ಸಾಧನೆ ತೋರಲು ಸಾಧ್ಯವಾಗದ ಹರ್ಮನ್‌ಪ್ರೀತ್ ಕೌರ್ ಟಿ20 ಸರಣಿಯ ನಾಯಕತ್ವ ವಹಿಸಲಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಟಿ20 ಚಾಂಪಿಯನ್‌ಶಿಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋಲನುಭವಿಸಿದ ಬಳಿಕ ಭಾರತ ಈ ವಿಭಾಗದಲ್ಲಿ ಮೊದಲ ಬಾರಿ ಕಣಕ್ಕಿಳಿಯುತ್ತಲಿದೆ. ಸೆಮಿಫೈನಲ್ ಪಂದ್ಯದಿಂದ ಮಿಥಾಲಿ ರಾಜ್‌ರನ್ನು ಹೊರಗಿಡಲಾಗಿತ್ತು. ಈ ನಡೆ ಭಾರೀ ವಿವಾದವನ್ನೂ ಸೃಷ್ಟಿಸಿತ್ತು. ಅಚ್ಚರಿಯ ವಿಷಯವೆಂದರೆ ಭಾರತ ಬ್ಯಾಟ್ಸ್‌ವುಮೆನ್ ಏಕದಿನ ಸರಣಿಯಲ್ಲಿ ಕಿವೀಸ್ ಸ್ಪಿನ್ನರ್‌ಗಳ ಎದುರು ಪರದಾಟ ನಡೆಸಿದ್ದರು. ಆ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಬೇಕಿದೆ. ಹರ್ಮನ್‌ಪ್ರೀತ್ ಬ್ಯಾಟಿಂಗ್ ಮೇಲೆ ಎಲ್ಲರ ನಿರೀಕ್ಷೆ ಇದೆ. ಸ್ಮತಿ ಮಂಧಾನಾ ಹಾಗೂ ಜೆಮಿಮಾ ರೋಡ್ರಿಗಸ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಲಯ ಕಳೆದುಕೊಂಡಿರುವ ವೇದಾ ಕೃಷ್ಣಮೂರ್ತಿ ಅವರ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ನೂತನ ಆಟಗಾರ್ತಿ ಪ್ರಿಯಾ ಪೂನಿಯ ಮೇಲೂ ಭರವಸೆಯ ಕಣ್ಣುಗಳಿವೆ.
ತಂಡಗಳು
►ಭಾರ: ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧಾನಾ, ಮಿಥಾಲಿ ರಾಜ್ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ್, ಏಕ್ತಾ ಬಿಸ್ತ್, ದಯಾಳನ್ ಹೇಮಲತಾ, ಮಾನಸಿ ಜೋಷಿ, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪ್ರಿಯಾ ಪೂನಿಯಾ.
►ನ್ಯೂಝಿಲೆಂಡ್: ಆ್ಯಮಿ ಸಟ್ಟರ್ಥ್‌ವೈಟ್(ನಾಯಕಿ), ಸುಝಿ ಬೇಟ್ಸ್, ಬೆರ್ನಾಡಿನ್ ಬೆಝುಡಿನೌಟ್, ಸೋಫಿ ಡಿವೈನ್, ಹೇಲಿ ಜೆನ್ಸೆನ್, ಕೈಟ್ಲಾನ್ ಗರ್ರಿ, ಲೇಯ್ ಕಾಸ್ಪರೆಕ್, ಅಮೇಲಿಯ ಕೆರ್, ಫ್ರಾನ್ಸೆಸ್ ಮ್ಯಾಕೆ, ಕೆಟಿ ಮಾರ್ಟಿನ್, ರೋಸ್‌ಮೇರಿ ಮೈರ್, ಹನ್ನಾ ರೋವ್, ಲೀ ತಾಹುಹು.







