ಅರ್ಹತೆ ಗಿಟ್ಟಿಸಲು ಅಂಕಿತಾ,ಕರ್ಮಾನ್ ಯತ್ನ
ಫೆಡ್ ಕಪ್ ಟೆನಿಸ್ ಟೂರ್ನಿ

ಹೊಸದಿಲ್ಲಿ, ಫೆ.5: ಬುಧವಾರ ಆರಂಭವಾಗಲಿರುವ ಫೆಡ್ ಕಪ್ ಟೆನಿಸ್ ಟೂರ್ನಮೆಂಟ್‌ನ ವರ್ಲ್ಡ್ ಗ್ರೂಪ್-2ರಲ್ಲಿ ಅರ್ಹತೆ ಗಿಟ್ಟಿಸಲು ಭಾರತದ ಅಗ್ರ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಹಾಗೂ ಕರ್ಮಾನ್ ಕೌರ್ ಥಂಡಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
‘ಎ’ ಗುಂಪಿನಲ್ಲಿರುವ ಭಾರತ ಗುರುವಾರ ಥಾಯ್ಲೆಂಡ್ ವಿರುದ್ಧ ಪಂದ್ಯದಲ್ಲಿ ಹೆಚ್ಚು ಸಮಸ್ಯೆ ಎದುರಿಸುವ ಸಾಧ್ಯತೆಯಿಲ್ಲ. ಆದರೆ, ಶುಕ್ರವಾರ ಕಝಕ್‌ಸ್ತಾನದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.
ಆತಿಥೇಯ ಕಝಕ್‌ಸ್ತಾನದಲ್ಲಿ ಇಬ್ಬರು ಅಗ್ರ-100 ಸಿಂಗಲ್ಸ್ ಆಟಗಾರರಿದ್ದಾರೆ. ವಿಶ್ವದ ನಂ.43ನೇ ಆಟಗಾರ್ತಿ ಯುಲಿಯಾ ಪುಟಿನ್‌ಸೇವಾ ಹಾಗೂ 96ನೇ ರ್ಯಾಂಕಿನ ಝರಿನಾ ದಿಯಾಸ್ ಭಾರತದ ಆಟಗಾರ್ತಿಗೆ ಸುಲಭವಾಗಿ ಶರಣಾಗಲಾರರು.
‘ಎ’ ಹಾಗೂ ‘ಬಿ’ ಗುಂಪುಗಳಲ್ಲಿ ನಾಲ್ಕು ತಂಡಗಳಿದ್ದು, ಇದರಲ್ಲಿ ಜಯ ಸಾಧಿಸುವ ತಂಡ ವರ್ಲ್ಡ್ ಗ್ರೂಪ್-2ಕ್ಕೆ ಅರ್ಹತೆ ಪಡೆಯಲಿದೆ.
‘ಬಿ’ ಗುಂಪಿನಲ್ಲಿ ಚೀನಾ, ಕೊರಿಯಾ, ಇಂಡೋನೇಶ್ಯಾ ಹಾಗೂ ಪೆಸಿಫಿಕ್ ಒಸಿಯಾನಿಯ ತಂಡಗಳಿವೆ. ಚೀನಾ ತಂಡದಲ್ಲಿ ವಿಶ್ವದ ನಂ.40ನೇ ಆಟಗಾರ್ತಿ ಶುಐ ಝಾಂಗ್ ಹಾಗೂ ವಿಶ್ವದ ನಂ.42ನೇ ಆಟಗಾರ್ತಿ ಸೈಸೈ ಝೆಂಗ್ ಅವರಿದ್ದಾರೆ. ಕಳೆದ ವರ್ಷ ಸ್ವದೇಶದಲ್ಲಿ ಸಿಂಗಲ್ಸ್‌ನಲ್ಲಿ ಅಜೇಯ ಅಭಿಯಾನ ನಡೆಸಿದ್ದ ಅಂಕಿತಾ ಅವರು ಪುಟಿನ್‌ಸೇವಾಗೆ ಶಾಕ್ ನೀಡಿದ್ದರು. ಆದರೆ, ಈ ಬಾರಿ ಕಝಕ್‌ಸ್ತಾನ ತವರಿನಲ್ಲಿ ಫೇವರಿಟ್ ಆಗಿದೆ. ಕರ್ಮಾನ್ ಕಳೆದ ವರ್ಷ ಝರಿನಾಗೆ ಸೋತಿದ್ದರು. ಈ ಬಾರಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.
ಅಂಕಿತಾ ಮೆಲ್ಬೋರ್ನ್‌ನಲ್ಲಿ ಗ್ರಾಂಡ್‌ಸ್ಲಾಮ್ ಅರ್ಹತಾ ಪಂದ್ಯವನ್ನು ಆಡಿದ ಬಳಿಕ ಇತ್ತೀಚೆಗೆ ಸಿಂಗಾಪುರದಲ್ಲಿ ಪ್ರಶಸ್ತಿ ಜಯಿಸಿದ್ದರು. ಇದೀಗ ಅವರು ಜೀವನಶ್ರೇಷ್ಠ 165ನೇ ರ್ಯಾಂಕಿನಲ್ಲಿದ್ದಾರೆ. ಪ್ರಾರ್ಥನಾ ಥಾಂಬರೆ ಭಾರತೀಯ ತಂಡದಲ್ಲಿರುವ ಏಕೈಕ ಡಬಲ್ಸ್ ಸ್ಪೆಷಲಿಸ್ಟ್. ಈ ತಂಡದಲ್ಲಿ ಎರಡು ಬಾರಿಯ ನ್ಯಾಶನಲ್ ಚಾಂಪಿಯನ್ ಮಹಾಕ್ ಜೈನ್ ಹಾಗೂ ಮಾಜಿ ಚಾಂಪಿಯನ್ ರಿಯಾ ಭಾಟಿಯಾ ಅವರಿದ್ದಾರೆ.







