ಪಾಕ್ ವಿಶ್ವಕಪ್ ತಂಡಕ್ಕೆ ಸರ್ಫರಾಝ್ ನಾಯಕ
ಪಿಸಿಬಿ ಮುಖ್ಯಸ್ಥ ಎಹ್ಸಾನ್

ಲಾಹೋರ್, ಫೆ.5: ಜನಾಂಗೀಯ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆಪಾದನೆಯ ಮೇರೆಗೆ ಐಸಿಸಿಯಿಂದ ನಿಷೇಧಕ್ಕೊಳಗಾಗಿರುವ ಮಧ್ಯೆಯೂ ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಸರ್ಫರಾಝ್ ಅಹ್ಮದ್ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ಸಮಿತಿ ಮುಖ್ಯಸ್ಥ ಎಹ್ಸಾನ್ ಮಣಿ ತಿಳಿಸಿದ್ದಾರೆ.
ದ.ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಆಟಗಾರ ಆ್ಯಂಡಿಲೆ ಫೆಹ್ಲುಕ್ವಾಯೊ ಅವರಿಗೆ ಜನಾಂಗೀಯ ನಿಂದನೆ ಮಾಡಿದ್ದು ಸ್ಟಂಪ್ ಬಳಿ ಅಳವಡಿಸಲಾದ ಮೈಕ್ರೋಫೋನ್‌ನಲ್ಲಿ ದಾಖಲಾಗಿದ್ದರಿಂದ ಐಸಿಸಿ ಸರ್ಫರಾಝ್‌ಗೆ 4 ಪಂದ್ಯಗಳ ನಿಷೇಧ ಹೇರಿದೆ. ಘಟನೆಯ ಕುರಿತು ಸರ್ಫರಾಝ್ ಕ್ಷಮೆ ಕೋರಿದ್ದರು.
‘‘ವಿಶ್ವಕಪ್ ಟೂರ್ನಿಯವರೆಗೂ ಸರ್ಫರಾಝ್ ಅವರೇ ನಾಯಕನಾಗಿ ಪಾಕ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಗ್ಗೆ ನನಗೆ ಯಾವುದೇ ಅನುಮಾನಗಳಿಲ್ಲ. ಪರ್ಯಾಯ ನಿರ್ಧಾರ ತೆಗೆದುಕೊಳ್ಳುವವರೆಗೂ ಅವರು ನಾಯಕನ ಸ್ಥಾನದಲ್ಲಿರಲಿದ್ದಾರೆ. ವಿಶ್ವಕಪ್ ನಂತರವೇ ನಾಯಕರಾಗಿ ಸರ್ಫರಾಝ್ ನೀಡಿದ ಪ್ರದರ್ಶನದ ವೌಲ್ಯಮಾಪನ ನಡೆಯಲಿದೆ’’ ಎಂದು ಮಣಿ ಸ್ಪಷ್ಟಪಡಿಸಿದ್ದಾರೆ.
ಬೆಂಬಲ ದೊರೆತಿರುವುದಕ್ಕೆ ನಾಯಕ ಸರ್ಫರಾಝ್ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.





