ಬಿಡ್ ಸಲ್ಲಿಸಿದ ಭಾರತ: ವಿಶ್ವಕಪ್ ಹಾಕಿ ಆತಿಥ್ಯ
ಲೌಸಾನ್, ಫೆ.5: ಮುಂದಿನ ಆವೃತ್ತಿಯ ವಿಶ್ವಕಪ್ ಹಾಕಿ ಆತಿಥ್ಯ ವಹಿಸಿಕೊಳ್ಳಲು ಬಿಡ್ ಸಲ್ಲಿಸಿದ 6 ದೇಶಗಳಲ್ಲಿ ಭಾರತ ಒಂದಾಗಿದೆ ಎಂದು ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟ ಮಂಗಳವಾರ ತಿಳಿಸಿದೆ.
2023ರ ಜ.13-29ರ ಅವಧಿಯಲ್ಲಿ ಮಹಿಳಾ ಅಥವಾ ಪುರುಷರ ವಿಶ್ವಕಪ್‌ನ್ನು ಆಯೋಜಿಸುವುದಾಗಿ ಭಾರತ, ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ಗಳು ಪ್ರಸ್ತಾವ ಸಲ್ಲಿಸಿವೆ. ಭಾರತವು ಪುರುಷರ ವಿಶ್ವಕಪ್‌ನ್ನು ಮೂರು ಬಾರಿ ಆಯೋಜಿಸಿದೆ. ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದ ಸ್ಪರ್ಧೆಯೂ ಇದರಲ್ಲಿ ಸೇರಿದೆ.
ಮತ್ತೊಂದೆಡೆ ಜರ್ಮನಿ, ಸ್ಪೇನ್ ಹಾಗೂ ಮಲೇಶ್ಯ ದೇಶಗಳು ಜು.1-17ರ ಅವಧಿಯಲ್ಲಿ ವಿಶ್ವಕಪ್ ಆತಿಥ್ಯ ವಹಿಸಲು ಪ್ರಸ್ತಾವ ಸಲ್ಲಿಸಿವೆ.
‘‘ಬಿಡ್ ಸಲ್ಲಿಸುವ ದೇಶಗಳಿಗೆ ಜು.1-17, 2022 ಅಥವಾ ಜ.13-29, 2023ರ ಎರಡು ದಿನಾಂಕಗಳಲ್ಲಿ ತಮ್ಮ ಆದ್ಯತಾ ದಿನಾಂಕವನ್ನು 2019ರ ಜ.31ರವರೆಗೆ ಸೂಚಿಸಲು ತಿಳಿಸಲಾಗಿತ್ತು’’ ಎಂದು ಎಫ್‌ಐಎಚ್ ಹೇಳಿಕೆಯಲ್ಲಿ ತಿಳಿಸಿದೆ. ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟವು ಈಗಿನಿಂದಲೇ ಬಿಡ್‌ಗಳ ವೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಲಿದ್ದು, ಒಕ್ಕೂಟದ ಕಾರ್ಯಕಾರಿ ಮಂಡಳಿಯು ಆತಿಥ್ಯದ ದಿನಾಂಕವನ್ನು ಈ ವರ್ಷದ ಜೂನ್‌ನಲ್ಲಿ ಅಂತಿಮಗೊಳಿಸಲಿದೆ.





