ಔರಾದ್ಕರ್ ಸಮಿತಿ ಶಿಫಾರಸ್ಸು ಜಾರಿಗೆ ಸರಕಾರ ಬದ್ಧ: ಎಂ.ಬಿ.ಪಾಟೀಲ್

ಧಾರವಾಡ, ಫೆ.5: ನೂತನ ವೇತನ ಶ್ರೇಣಿ ಸೇರಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಶಿಫಾರಸ್ಸು ಮಾಡಿರುವ ಔರಾದ್ಕರ್ ಸಮಿತಿ ವರದಿಯನ್ನು ಜಾರಿ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಜರುಗಿದ 4ನೇ ತಂಡದ ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೊಲೀಸ್ ತರಬೇತಿ ಶಾಲೆಯು ಪೊಲೀಸ್ ಇಲಾಖೆಯ ಹೃದಯವಿದ್ದಂತೆ. ಇಲ್ಲಿ ನೀಡುವ ಶಾರೀರಿಕ, ಮಾನಸಿಕ ಮತ್ತು ನೈತಿಕ ಶಿಕ್ಷಣ ಬಹು ಮುಖ್ಯವಾದುದು. ಇಲಾಖೆಯಲ್ಲಿ ಬದಲಾವಣೆ ತರುವುದಾದರೆ ಅದು ತರಬೇತಿ ಶಾಲೆಯಿಂದ ಆರಂಭವಾಬೇಕು. ಆದುದರಿಂದ, ಪೊಲೀಸ್ ತರಬೇತಿ ಶಾಲೆಗಳ ಅಭಿವೃದ್ಧಿ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
ವಿಶ್ವದ ಇತರ ರಾಷ್ಟ್ರಗಳಿಗೆ ಹೊಲಿಸಿದರೆ ನಮ್ಮ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ಮತ್ತು ಗೌರವವಿದೆ. ಇತರ ರಾಜ್ಯ, ರಾಷ್ಟ್ರಗಳ ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುವ ನೂತನ ಕ್ರಮಗಳನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸಲು ಮತ್ತು ಸೈಬರ್ ಕ್ರೈಂ, ಫೋರೆನಿಕ್ಸ್‌ನಂತಹ ತಂತ್ರಜ್ಞಾನ ಆಧಾರಿತ ಶಾಖೆಗಳನ್ನು ಉತ್ತಮ ಪಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದರು.
ನಿಷ್ಪಕ್ಷಪಾತವಾದ ಸೇವೆ ಸಲ್ಲಿಸುವ ಪ್ರತಿಜ್ಞೆ ಮಾಡಿರುವ ಪ್ರತಿಯೊಬ್ಬ ಪೊಲೀಸ್ ಪೇದೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಸ್ತಕ್ಷೇಪ, ತಾರತಮ್ಯವಿಲ್ಲದೆ ನಿಷ್ಪಕ್ಷಪಾತವಾದ ಸೇವೆಗೆ ಆದ್ಯತೆ ನೀಡಬೇಕೆಂದು ಎಂ.ಬಿ.ಪಾಟೀಲ್ ಕರೆ ನೀಡಿದರು.
ಬೆಂಗಳೂರಿನಂತಹ ಬೃಹತ್ ನಗರ ಸುರಕ್ಷಿತ ನಗರವಾಗಿರಲು ಇಲಾಖೆಯ ಶ್ರಮ ಸಾಕಷ್ಟಿದೆ. ಪೊಲೀಸ್ ಇಲಾಖೆಯ ಕಟ್ಟಡ, ಕಚೇರಿ, ವಸತಿ-ಸಮುಚ್ಛಯ ಮತ್ತು ತರಬೇತಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದರು.
ತರಬೇತಿ ಶಾಲೆ ಪ್ರಾಂಶುಪಾಲ ಆರ್.ಎ.ಪಾರಶೆಟ್ಟಿ ಸ್ವಾಗತಿಸಿ, ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪರೇಡ್ ಕಮಾಂಡರ್ ಟಿ.ಫೈಝುದ್ದೀನ್ ಮತ್ತು ಭರತ ಜಿ.ತಳವಾರ ನೇತೃತ್ವದಲ್ಲಿ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಪೇರೆಡ್ ಮೂಲಕ ಪಥಸಂಚಲನ ನಡೆಸಿ ಗೌರವ ವಂದನೆ ಸಲ್ಲಿಸಿದರು.
ಪೊಲೀಸ್ ಇಲಾಖೆ ತರಬೇತಿ ವಿಭಾಗದ ಮಹಾನಿರ್ದೇಶಕ ಪಿ.ಕೆ. ಗರ್ಗ್, ಉತ್ತರ ವಲಯ ಐ.ಜಿ.ಪಿ. ಆರ್.ರೇವಣ್ಣ, ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಉಪಸ್ಥಿತರಿದ್ದರು.







