ಸಾವಿನಲ್ಲೂ ದುಬಾರಿಯಾದ ಕ್ರಿಪ್ಟೊ ಕರೆನ್ಸಿ ಕಂಪೆನಿಯ ಸಿಇಒ!
ವಾಷಿಂಗ್ಟನ್, ಫೆ.6: ಕರುಳು ರೋಗದಿಂದ ಬಳಲುತ್ತಿದ್ದ ಕೆನಡಾ ಮೂಲದ ಕ್ರಿಪ್ಟೋಕರೆನ್ಸಿ ಕಂಪನಿಯ ಸಿಇಒ ಭಾರತದಲ್ಲಿ ಕೊನೆಯುಸಿರೆಳೆದಿದ್ದು, 190 ದಶಲಕ್ಷ ಡಾಲರ್ ಹೂಡಿಕೆದಾರರ ಕರೆನ್ಸಿ ಲಾಕ್ ಆಗಿರುವ ಪಾಸ್ವರ್ಡ್ ಅವರಿಗೆ ಮಾತ್ರ ತಿಳಿದಿದ್ದ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ.
ಸಿಇಓ ಈ ಪಾಸ್ವರ್ಡನ್ನು ತನ್ನೊಂದಿಗೇ ಒಯ್ದಿರುವ ಹಿನ್ನೆಲೆಯಲ್ಲಿ ಭದ್ರತಾ ತಜ್ಞರು ಎನ್ಕ್ರಿಪ್ಟೆಡ್ ಪಾಸ್ವರ್ಡ್ ಬೇಧಿಸಲು ವಿಫಲರಾಗಿದ್ದು, ಕಕ್ಷಿದಾರರು ಆತಂಕಗೊಂಡಿದ್ದಾರೆ. ಈ ಸ್ವಾರಸ್ಯಕರ ಘಟನೆಯ ಸುದ್ದಿ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಇದೀಗ ಅನಾವರಣಗೊಂಡಿದೆ. ವಾಸ್ತವವಾಗಿ ಕ್ವಾಡ್ರಿಗಾಸಿಎಕ್ಸ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಗೆರಾಲ್ಡ್ ಕಾಟೆನ್ (30) ಡಿಸೆಂಬರ್ನಲ್ಲಿ ಮೃತಪಟ್ಟಿದ್ದರು ಎಂದು ಕಾಟೆನ್ ಅವರ ಪತ್ನಿ ಜೆನ್ನಿಫರ್ ರಾಬರ್ಟ್ಸರ್ ಹೇಳಿದ್ದಾರೆ.
ಭಾರತದಲ್ಲಿ ನಿರಾಶ್ರಿತ ಮಕ್ಕಳ ಸಲುವಾಗಿ ಆರಂಭಿಸಿದ ಅನಾಥಾಶ್ರಮ ಉದ್ಘಾಟನೆಗೆ ತೆರಳಿದ್ದ ಕಾಟೆನ್ ಪ್ರಯಾಣಮಧ್ಯೆ ಮೃತಪಟ್ಟಿದ್ದಾರೆ ಎಂದು ಕಂಪನಿಯ ಸಮಾಜ ಮಾಧ್ಯಮ ಪುಟ ಹೇಳಿದೆ. ರಾಬರ್ಟ್ಸನ್ ಮತ್ತು ಕ್ವಾಡ್ರಿಗಾಸಿಎಕ್ಸ್ ಕೆನಡಾ ನ್ಯಾಯಾಲಯದಲ್ಲಿ ಕ್ರೆಡಿಟ್ ಸುರಕ್ಷೆಗೆ ಅರ್ಜಿ ಸಲ್ಲಿಸಿದ ಬಳಿಕವಷ್ಟೇ ನಿಧನ ಸುದ್ದಿ ಬಹಿರಂಗಪಡಿಸಲಾಗಿದೆ. ಈ ಅಮೂಲ್ಯ ಆಸ್ತಿಗಳನ್ನು ಹೊಂದಿದ್ದ ಕಾಟೆನ್ ಅವರ ಎನ್ಕ್ರಿಪ್ಟೆಡ್ ಖಾತೆಯನ್ನು ಭೇದಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಹೇಳಿಕೆಯನ್ನು ಜನವರಿ 31ರಂದು ಪೋಸ್ಟ್ ಮಾಡಲಾಗಿದೆ. ನೋವಾಸ್ಕೋಟಿಯಾ ಸುಪ್ರೀಂಕೋರ್ಟ್ನಲ್ಲಿ ಕ್ವಾಡಿಗ್ರಾಸಿಎಕ್ಸ್ ಅರ್ಜಿ ಸಲ್ಲಿಸಿದ್ದು, ಮಹತ್ವದ ಹಣಕಾಸು ಸಂರ್ಕೀಣತೆಯ ಹಿನ್ನೆಲೆಯಲ್ಲಿ ನಮ್ಮ ಗ್ರಾಹಕರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದೆ. ಈ ದ್ರವ್ಯತೆ ಸಮಸ್ಯೆ ಬಗೆಹರಿಸಲು ಕಳೆದ ಕೆಲ ವಾರಗಳಿಂದ ವಿಸ್ತತ ಪ್ರಯತ್ನ ನಡೆದಿದೆ. ಅತ್ಯಂತ ಮಹತ್ವದ ಕ್ರಿಪ್ಟೊಕರೆನ್ಸಿ ದಾಸ್ತಾನು ಇಡಲಾಗಿದ್ದ ಕೋಲ್ಡ್ ವ್ಯಾಲೆಟ್ ಪತ್ತೆ ಮಾಡುವ ಪ್ರಯತ್ನ ವಿಫಲವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.