ಮೈತ್ರಿ ಸರಕಾರಕ್ಕೆ ಬಜೆಟ್ ಮಂಡಿಸುವ ನೈತಿಕತೆ ಇಲ್ಲ: ವಿಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು, ಫೆ. 6: ‘ಹತ್ತರಿಂದ ಹದಿನೈದು ಮಂದಿ ಶಾಸಕರು ಸದನಕ್ಕೆ ಗೈರಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿ ಇರಲು ಮತ್ತು ಆಯವ್ಯಯ ಮಂಡಿಸುವ ಯಾವುದೇ ನೈತಿಕತೆ ಇಲ್ಲ’ ಎಂದು ವಿಪಕ್ಷ ನಾಯಕ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅವರ ಶಾಸಕರ ಮೇಲೆ ವಿಶ್ವಾಸವಿಲ್ಲ. ಹೈಕಮಾಂಡ್ ಮೇಲೆ ಒತ್ತಡ ತಂದು ಶಾಸಕರನ್ನು ಸದನಕ್ಕೆ ಬರುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವರ್ಗಾವಣೆ ದಂಧೆ ಮಿತಿಮೀರಿದೆ. ಸಿಎಂ ಕುಮಾರಸ್ವಾಮಿ ತಾವು ಗುಮಾಸ್ತನಂತೆ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಅಸಹಾಯಕತೆ ತೋರಿಸಿದ್ದಾರೆ. ಹೀಗಾಗಿ ತಾವು ರಾಜ್ಯಪಾಲರ ಭಾಷಣವನ್ನು ಬಹಿಷ್ಕಾರ ಮಾಡಿದ್ದೇವೆ ಎಂದರು.
ತಾನೇ ಬಿದ್ದು ಹೋಗುತ್ತದೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ. ಅದರ ಅಗತ್ಯವೂ ಇಲ್ಲ. ಮೈತ್ರಿ ಸರಕಾರ ತಾನಾಗಿಯೇ ಬಿದ್ದು ಹೋಗುತ್ತದೆ ಎಂದು ಯಡಿಯೂರಪ್ಪ ಇದೇ ವೇಳೆ ಭವಿಷ್ಯ ನುಡಿದರು.
‘ಮೈತ್ರಿ ಸರಕಾರದ ಅಲುಗಾಟದ ಹಿಂದೆ ಬಿಜೆಪಿ ಇಲ್ಲ. ಅತೃಪ್ತ ಶಾಸಕರ ಬೆನ್ನಿಗೆ ಯಾರು ನಿಂತಿದ್ದಾರೆಂದು ತಿಳಿಯಲು ಯತ್ನಿಸುತ್ತಿದ್ದೇವೆ. ಡಿ.ಕೆ.ಶಿವಕುಮಾರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಪೈಕಿ ಯಾರ ಬೆಂಬಲ ಈ ಅತೃಪ್ತ ಶಾಸಕರಿಗೆ ಇದೆ ನಮಗೆ ಗೊತ್ತಿಲ್ಲ’
-ಆರ್.ಅಶೋಕ್ , ಬಿಜೆಪಿ ಮುಖಂಡ
ಅಧಿವೇಶನಕ್ಕಿಂತ ದೇಶಭಕ್ತಿ ಮುಖ್ಯ
‘ವಿಧಾನ ಮಂಡಲ ಅಧಿವೇಶನಕ್ಕಿಂತ ದೇಶ ಮತ್ತು ದೇಶಭಕ್ತಿ ಮುಖ್ಯ. ಹೀಗಾಗಿ ನಾನು ‘ಉರಿ’ ಚಿತ್ರ ವೀಕ್ಷಣೆಗೆ ಬಂದಿದ್ದೇನೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣದಲ್ಲಿ ಯಾವುದೇ ವಿಶೇಷತೆ ಇರುವುದಿಲ್ಲ. ನಾಳೆಯಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುವೆ’
-ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕ
‘ಅಧಿವೇಶನಕ್ಕೆ ಹದಿನೈದು ಮಂದಿ ಶಾಸಕರು ಗೈರು ಹಾಜರಾಗಿದ್ದು, ಮೈತ್ರಿ ಸರಕಾರಕ್ಕೆ ಬಹುಮತವಿಲ್ಲ. ಕುಮಾರಸ್ವಾಮಿ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಅಧಿಕಾರವಿಲ್ಲ. ಹೀಗಾಗಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಯಿಂದ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪಡೆಯಲು ಮನವಿ ಮಾಡುತ್ತೇವೆ’
-ಬಿ.ಶ್ರೀರಾಮುಲು, ಬಿಜೆಪಿ ಮುಖಂಡ







