ಉಡುಪಿ: 12ರಂದು ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
ಉಡುಪಿ, ಫೆ. 6: ಕರ್ನಾಟಕ ನಾಟಕ ಅಕಾಡೆಮಿಯ 2018-19ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಫೆ.12ರಂದು ನಗರದ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಸಂಜೆ 4:30ಕ್ಕೆ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ಅಕಾಡೆಮಿ ಈಗಾಗಲೇ ಪ್ರಕಟಿಸಿದ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಅಲ್ಲದೇ ಪದ್ಮಾ ಕೊಡಗು ಅವರ ‘ಉಡುಪಿ ಜಿಲ್ಲಾ ರಂಗಮಾಹಿತಿ’ ಹಾಗೂ ಬಸವರಾಜ ಬೆಂಗೇರಿ ಅವರ ‘ಅವಿಭಜಿತ ಧಾರವಾಡ ಜಿಲ್ಲಾ ರಂಗಮಾಹಿತಿ’ ಕೃತಿಗಳೊಂದಿಗೆ ಅಕಾಡೆಮಿ ಸದಸ್ಯ ಗಣೇಶ ಅಮೀನಗಡ ಅವರ ‘ರಹಿಮಾನವ್ವ ಕಲ್ಮನಿ’ ಕೃತಿಯ ಬಿಡುಗಡೆ ನಡೆಯಲಿದೆ ಎಂದರು.
ಕಾರ್ಯಕ್ರಮವನ್ನು ಖ್ಯಾತ ಲೇಖಕ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಉದ್ಘಾಟಿಸಲಿದ್ದು, ನಾಡಿನ ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಕಟಪೂರ್ವ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಬಾರಿ ಪಿ.ಗಂಗಾಧರ ಸ್ವಾಮಿ ಅವರು ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದು, ಪ್ರಶಸ್ತಿಯೊಂದಿಗೆ 50,000ರೂ.ನಗದುಬಹುಮಾನ ಪಡೆಯಲಿದ್ದಾರೆ. ನಾಡಿನ ಒಟ್ಟು 25 ಮಂದಿ ಕಲಾವಿದರು, ರಂಗಕರ್ಮಿಗಳು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರು ತಲಾ 25,000ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ಪಡೆಯಲಿದ್ದಾರೆ ಎಂದರು.
ರಾಜಪ್ಪ ಕಿರಗಸೂರು, ಬಸಪ್ಪ ಶರಣಪ್ಪ ಮದರಿ, ಹುವಿವಾನ ಗಂಗಾಧರಯ್ಯ, ಹನುಮಂತಪ್ಪ ವೆ.ಬಾಗಲಕೋಟೆ, ಅಂಜಿನಪ್ಪ, ಸಾವಿತ್ರಿ ನಾರಾಯಣಪ್ಪ ಗೌಡರ, ಜಕಾವುಲ್ಲಾ ಗಂಡಸಿ, ಖಾಜೇಸಾಬ ನಬೀಸಾಬ ಜಂಗಿ, ಮೈಮ್ ರಮೇಶ್, ಕೆಂಚೇಗೌಡ ಟಿ., ಪಿ.ಪ್ರಭಾಕರ ಕಲ್ಯಾಣಿ, ಚಿಂದೋಡಿ ಎಲ್. ಚಂದ್ರಧರ, ಡಿ.ಎಂ.ರಾಜಕುಮಾರ್, ಡಿ.ಎಲ್.ನಂಜುಂಡಸ್ವಾಮಿ,ಈಶ್ವರ ದಲ, ಮೋಹನ್ ಮಾರ್ನಾಡು, ಉಷಾ ಭಂಡಾರಿ, ಪ್ರಭಾಕರ ಜೋಶಿ, ಎಸ್. ಅಂಜೀನಮ್ಮ, ಡಾ.ಕೆ.ವೈ.ನಾರಾಯಣಸ್ವಾಮಿ, ಜಗದೀಶ್ ಕೆಂಗನಾಳ್, ಉಗಮ ಶ್ರೀನಿವಾಸ, ವಿಜಯಾನಂದ ಕರಡಿಗುಡ್ಡ, ಮಕಬೂಲ ಹುಣಸಿಕಟ್ಟಿ, ಎಂ.ರವಿ ಈ ಬಾರಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ರಂಗಕಲಾವಿದರು, ರಂಗಕರ್ಮಿ ಗಳಾಗಿದ್ದಾರೆ.
ಸಿರಿಗೇರಿ ಯರಿಸ್ವಾಮಿ ಅವರ ‘ರಂಗಸಂಭ್ರಮ’ 2017ರ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿದ್ದು, 25,000ರೂ.ಗಳನಗದು ಬಹುಮಾನ ಪಡೆಯಲಿದೆ. ಮೃತ್ಯುಂಜಯ ಸ್ವಾಮಿ ಹಿರೇಮಠ, ನಿಕೋಲಸ್, ಎಂ.ಎಸ್. ಮಾಳವಾಡ ಹಾಗೂ ನ.ಲಿ.ನಾಗರಾಜ್ ಇವರು ವಿವಿಧ ದತ್ತಿ ಪುರಸ್ಕಾರಗಳಿಗೆ ಆಯ್ಕೆಯಾಗಿದ್ದು, ಇವರಿಗೆ ತಲಾ 5,000ರೂ.ಗಳ ನಗದು ಬಹುಮಾನ ನೀಡ ಲಾಗುವುದು ಎಂದು ಲೋಕೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಹಾಗೂ ಅಕಾಡೆಮಿ ಸದಸ್ಯ ಬಾಸುಮಾ ಕೊಡಗು ಉಪಸ್ಥಿತರಿದ್ದರು.







