ಮಲೆನಾಡಿನ ವಿವಿಧೆಡೆ ದಿಢೀರ್ ಸುರಿದ ಮಳೆ: ರೈತರು, ಸಾರ್ವಜನಿಕರಲ್ಲಿ ಸಂತಸದ ಜೊತೆ ಆತಂಕ

ಚಿಕ್ಕಮಗಳೂರು, ಫೆ.6: ಮಲೆನಾಡಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಭಾರೀ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು, ಅಕಾಲಿಕ ಮಳೆಯಿಂದಾಗಿ ಮಲೆನಾಡಿನ ರೈತರು, ಸಾರ್ವಜನಿಕರಲ್ಲಿ ಸಂತದ ಜೊತೆಗೆ ಆತಂಕಕ್ಕೂ ಕಾರಣವಾಯಿತು.
ಬುಧವಾರ ಬೆಳಗಿನಿಂದ ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಎನ್,ಆರ್.ಪುರ, ಕೊಪ್ಪ, ಶೃಂಗೇರಿ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕಳೆಯುತ್ತಿದ್ದಂತೆ, ಚಿಕ್ಕಮಗಳೂರು ತಾಲೂಕಿನ ಆವುತಿ, ಮೂಡಿಗೆರೆ ತಾಲೂಕಿನ ಕಳಸ, ಹಿರೇಬೈಲು, ಜಾವಳಿ, ಬಾಳೆಹೊಳೆ, ಎನ್.ಆರ್,ಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತ ಹಾಗೂ ಕೊಪ್ಪ ತಾಲೂಕಿನ ಜಯಪುರ ಹೋಬಳಿಯ ಕೆಲವೆಡೆ ಗುಡುಗು, ಮಿಂಚು ಸಹಿತ ದಿಢೀರ್ ಮಳೆಯಾದ ಬಗ್ಗೆ ವರದಿಯಾಗಿದೆ.
ಧಾರಾಕಾರ ಮಳೆಯಿಂದಾಗಿ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಎಲ್ಲೂ ವರದಿಯಾಗಿಲ್ಲ. ದಿಢೀರ್ ಸುರಿದ ಅಕಾಲಿಕ ಮಳೆಯಿಂದಾಗಿ ಕಳೆದ ಕೆಲ ತಿಂಗಳಿನಿಂದ ಮಲೆನಾಡು ಭಾಗದಲ್ಲಿದ್ದ ಭಾರೀ ಬಿಸಿಲಿನ ಕಾವು ಕಡಿಮೆಯಾಗಿದ್ದು, ಸೆಕೆಯ ತಾಪದಿಂದ ಬಸವಳಿದಿದ್ದ ಜನರಿಗೆ ತಂಪೆರೆದಂತಾಗಿದೆ. ಇನ್ನು ಶೃಂಗೇರಿ, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಮಲೆನಾಡಿನಲ್ಲಿ ಮಳೆಯಾದ ಪ್ರದೇಶಗಳಲ್ಲಿ ಹೊರತು ಪಡಿಸಿ ಉಳಿದೆಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಬೆಳಗ್ಗೆಯಿಂದಲೇ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆರಂಭವಾಗಿತ್ತು.
ಬುಧವಾರ ಸುರಿದ ಅಕಾಲಿಕ ಮಳೆ ಸಾರ್ವಜನಿಕರಲ್ಲಿ ಸಂತಸಕ್ಕೆ ಕಾರಣವಾಗಿದ್ದರೂ ಕಾಫಿ, ಅಡಿಕೆ ಬೆಳೆಗಾರರಲ್ಲಿ ಸಂತಸದೊಂದಿಗೆ ಆತಂಕಕ್ಕೆ ಕಾರಣವಾಗಿದೆ. ಸದ್ಯ ಮಲೆನಾಡಿನಲ್ಲಿ ಕಾಫಿ, ಅಡಿಕೆ ಕೊಯ್ಲು ನಡೆಯುತ್ತಿದ್ದು, ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಅಡಿಕೆ, ಕಾಫಿ ಒಣಗಿಸಲು ಸಾಧ್ಯವಾಗದೇ ಬೆಳೆಗಾರರಲ್ಲಿ ಬೆಳೆ ನಷ್ಟದ ಆತಂಕ ಮೂಡಿದೆ. ಮಲೆನಾಡಿನ ಕೆಲವೆಡೆ ಕಾಫಿ ಕಟಾವು ಇನ್ನೂ ಪೂರ್ಣಗೊಂಡಿಲ್ಲ. ಮಳೆಯಿಂದಾಗಿ ಕಾಫಿ ಗಿಡಗಳಲ್ಲೇ ಹಣ್ಣುಗಳು ಕೊಳೆತು ಉದುರುವ ಭೀತಿಯಲ್ಲಿದ್ದಾರೆ. ಒಟ್ಟಾರೆ ಮಲೆನಾಡಿನಲ್ಲಿ ಬುಧವಾರ ದಿಢೀರ್ ಸುರಿದ ಅಕಾಲಿಕ ಮಳೆ ಸಾರ್ವಜನಿಕರಲ್ಲಿ ಸಂತಸ- ಆತಂಕ ಎರಡಕ್ಕೂ ಕಾರಣವಾಗಿದ್ದು, ಮಳೆ ಮುಂದುವರಿದಲ್ಲಿ ಕಾಫಿ, ಅಡಿಕೆ ಬೆಳೆಗಾರರು ಭಾರೀ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.








