ಜೆಎನ್‌ಯು ಪ್ರಕರಣ: ವಿಚಾರಣೆ ವಿಳಂಬದ ಬಗ್ಗೆ ನ್ಯಾಯಾಲಯ ಅಸಮಾಧಾನ

ಹೊಸದಿಲ್ಲಿ, ಫೆ.6: ಜೆಎನ್‌ಯು ವಿವಿ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಹಾಗೂ ಇತರರ ವಿರುದ್ಧ 2016ರಲ್ಲಿ ದಾಖಲಾಗಿರುವ ದೇಶದ್ರೋಹ ಪ್ರಕರಣದಲ್ಲಿ ಕಾನೂನುಕ್ರಮ ಜರಗಿಸಲು ಫೆ.28ರ ಒಳಗೆ ಅನುಮತಿ ಪಡೆದುಕೊಳ್ಳುವಂತೆ ದಿಲ್ಲಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ವಿಚಾರಣೆಗೆ ಅನುಮತಿ ಕೋರಿ ದಿಲ್ಲಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಸರಕಾರದ ಪ್ರತಿಕ್ರಿಯೆ ಎದುರು ನೋಡುತ್ತಿರುವುದಾಗಿ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ನ್ಯಾಯಾಲಯ, ಅಧಿಕಾರಿಗಳು ಯಾವುದೇ ಫೈಲುಗಳನ್ನು ಸುದೀರ್ಘಕಾಲ ಬಾಕಿ ಇರಿಸಲಾಗದು ಎಂದು ತಿಳಿಸಿತಲ್ಲದೆ, ಶೀಘ್ರ ನಿರ್ಧಾರ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳನ್ನು ಕೇಳಿಕೊಳ್ಳುವಂತೆ ಸೂಚಿಸಿತು. 2016ರ ಫೆಬ್ರವರಿ 9ರಂದು ವಿವಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರ ಸಂದರ್ಭ ನಡೆದಿದ್ದ ರ್ಯಾಲಿಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಹಾಗೂ ಸದಸ್ಯರಾದ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಈ ರ್ಯಾಲಿಯ ಮುಂದಾಳತ್ವ ವಹಿಸಿದ್ದರು ಎಂದು ಆರೋಪಿಸಿ ಇವರ ವಿರುದ್ಧ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ಆದರೆ ಕಾನೂನುಕ್ರಮ ಕೈಗೊಳ್ಳಲು ಅಗತ್ಯವಾದ ಅನುಮತಿ ಪಡೆಯದೆ ಪ್ರಕರಣ ದಾಖಲಿಸಿರುವ ಬಗ್ಗೆ ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿತ್ತು.





