ಆರೆಸ್ಸೆಸ್‌ಗೆ ಹೊಸ ಹೆಸರಿಟ್ಟ ಮಹಾರಾಷ್ಟ್ರ ರಾಜ್ಯಪಾಲ
ಹೊಸದಿಲ್ಲಿ, ಫೆ.6: ಮಹಾರಾಷ್ಟ್ರದ ರಾಜ್ಯಪಾಲ ಸಿ ವಿದ್ಯಾಸಾಗರ ರಾವ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ಕ್ಕೆ ‘ಸಂಘಸ್ತಾನ’ ಎಂದು ಹೊಸ ನಾಮಕರಣ ಮಾಡಿದ್ದು ಸಂಘದ ಸದಸ್ಯ ಎಂದು ಹೇಳಿಕೊಳ್ಳಲು ತನಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಸರ್ವರನ್ನು ಒಳಗೊಂಡ , ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರಿಸಿರುವ ಮತ್ತು ಜನರ ಧಾರ್ಮಿಕ ನಂಬಿಕೆಯನ್ನು ಗೌರವಿಸುವ ಸಂಘಟನೆಯಾಗಿದೆ. ನಾವೆಲ್ಲಾ ಸಂಘಸ್ತಾನದಿಂದ ಬಂದವರು ಮತ್ತು ಈ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಎಲ್‌ಕೆ ಅಡ್ವಾಣಿಯವರು ಬರೆದಿರುವ ಪುಸ್ತಕವೊಂದರ ಸಾಲುಗಳನ್ನು ರಾವ್ ಉಲ್ಲೇಖಿಸಿದರು. ಈ ಪುಸ್ತಕದಲ್ಲಿ ಆರೆಸ್ಸೆಸ್ ಮುಖಂಡ ಗೊವಾಳ್ಕರ್ (ಗುರೂಜಿ)ಯೊಂದಿಗೆ ತನ್ನ ಭೇಟಿಯನ್ನು ವಿವರಿಸಿರುವ ಅಡ್ವಾಣಿ, ತಾನು 21 ವರ್ಷದವನಿದ್ದಾಗ ಗುರೂಜಿಯನ್ನು ಭೇಟಿಯಾಗಿದ್ದೆ. ಇದು ಜಾತ್ಯಾತೀತತೆಯ ಕುರಿತು ತನಗೆ ದೊರೆತ ಪ್ರಥಮ ಪಾಠವಾಗಿತ್ತು ಎಂದಿದ್ದರು. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾಗಿರುವ ಆರೆಸ್ಸೆಸ್‌ನ ಜಾತ್ಯಾತೀತ ಚಿಂತನೆಯ ಬಗ್ಗೆ ಅಡ್ವಾಣಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ರಾವ್ ಹೇಳಿದರು. ಸುದೀರ್ಘಕಾಲದಿಂದ ಬಿಜೆಪಿ ಸದಸ್ಯರಾಗಿದ್ದ ರಾವ್ ಆರೆಸ್ಸೆಸ್ ಹಿನ್ನಲೆ ಹೊಂದಿದ್ದು ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದರು. 2014ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.