ಏಕತೆಗೆ ಕರೆ ನೀಡಿದ ಟ್ರಂಪ್: ಸಂಸತ್ತನ್ನು ಉದ್ದೇಶಿಸಿ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣ
ವಾಶಿಂಗ್ಟನ್, ಫೆ. 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಅಮೆರಿಕದ ಸಂಸತ್ತಿನಲ್ಲಿ ಮಾಡಿದ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣದಲ್ಲಿ ಏಕತೆಗೆ ಕರೆ ನೀಡಿದ್ದಾರೆ.
ಅದೇ ವೇಳೆ, ಮೆಕ್ಸಿಕೊ ಗಡಿ ಗೋಡೆ ಸೇರಿದಂತೆ ಕಠಿಣ ವಲಸೆ ಕಾರ್ಯಸೂಚಿಯನ್ನೂ ಮಂಡಿಸಿದ್ದಾರೆ.
ಅಫ್ಘಾನಿಸ್ತಾನದ ಬಗ್ಗೆ ಮಾತನಾಡಿದ ಅವರು, ತಾಲಿಬಾನ್ ಸೇರಿದಂತೆ ಸಂಬಂಧಪಟ್ಟ ಎಲ್ಲರೊಂದಿಗೆ ಮಾತನಾಡುತ್ತಾ ರಾಜಕೀಯ ಪರಿಹಾರವೊಂದನ್ನು ಪಡೆಯುವ ಪ್ರಕ್ರಿಯೆಗೆ ನನ್ನ ಆಡಳಿತ ವೇಗವನ್ನು ಒದಗಿಸಿದೆ ಎಂದು ಹೇಳಿದರು.
‘‘ಮಾತುಕತೆಗಳು ಪ್ರಗತಿ ಕಂಡ ಬಳಿಕ, ಅಫ್ಘಾನಿಸ್ತಾನದಲ್ಲಿ ನಮ್ಮ ಸೇನೆಯ ಸಂಖ್ಯೆಯನ್ನು ಕಡಿತಗೊಳಿಸಲು ನಮಗೆ ಸಾಧ್ಯವಾಗುತ್ತದೆ ಹಾಗೂ ನಾವು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ’’ ಎಂದು ಅವರು ನುಡಿದರು.
ಆದರೆ, ಅವರು ವಾಪಸಾತಿ ವೇಳಾಪಟ್ಟಿಯನ್ನು ನೀಡಲಿಲ್ಲ ಹಾಗೂ ಸೈನಿಕರ ಸಂಖ್ಯೆಯಲ್ಲಿ ಎಷ್ಟು ಕಡಿತ ಮಾಡಲಾಗುತ್ತದೆ ಎಂಬುದನ್ನು ಹೇಳಲಿಲ್ಲ.
ಅಮೆರಿಕ ಸಂಸತ್ತು ಕಾಂಗ್ರೆಸ್‌ನ ಎರಡು ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅವರು 82 ನಿಮಿಷಗಳ ಕಾಲ ಮಾತನಾಡಿದರು.
ಅರ್ಹತೆಯ ಆಧಾರದಲ್ಲಿ ಜನರು ವಲಸೆ ಬರಲಿ
►ವಲಸೆಯನ್ನು ಸಹಿಸುವುದಿಲ್ಲ: ಟ್ರಂಪ್
ಜನರು ಅಮೆರಿಕಕ್ಕೆ ಅರ್ಹತೆಯ ಆಧಾರದಲ್ಲಿ ಬರಬೇಕು ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ವಲಸೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
‘‘ನಮ್ಮ ನಾಗರಿಕರ ಬದುಕು ಮತ್ತು ಉದ್ಯೋಗಗಳನ್ನು ರಕ್ಷಿಸುವ ವಲಸೆ ವ್ಯವಸ್ಥೆಯೊಂದನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ’’ ಎಂದು ತನ್ನ ವಾರ್ಷಿಕ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣದಲ್ಲಿ ಟ್ರಂಪ್ ಹೇಳಿದ್ದಾರೆ.
ದಕ್ಷಿಣ ಮೆಕ್ಸಿಕೊದ ಕಾನೂನಿನ ಆಡಳಿತವಿರದ ರಾಜ್ಯದ ಗಡಿಯು ಎಲ್ಲ ಅಮೆರಿಕನ್ನರ ಸುರಕ್ಷತೆ, ಭದ್ರತೆ ಮತ್ತು ಆರ್ಥಿಕ ಕಲ್ಯಾಣಕ್ಕೆ ಬೆದರಿಕೆಯಾಗಿದೆ ಎಂದು ಅವರು ಬಣ್ಣಿಸಿದರು.