ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಇಬ್ಬರು ವೈದ್ಯರು ಸಹಿತ ಮೂವರು ಸಾಕ್ಷಿಗಳ ವಿಚಾರಣೆ
ಉಡುಪಿ, ಫೆ.6: ಉಡುಪಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಇಬ್ಬರು ವೈದ್ಯರು ಸೇರಿದಂತೆ ಮೂವರು ಸಾಕ್ಷಿಗಳ ಮುಖ್ಯ ಹಾಗೂ ಅಡ್ಡ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಸಲಾಯಿತು.
ಬಂಧನ ಸಂದರ್ಭ ಕೈಯಲ್ಲಿದ್ದ ವಜ್ರದ ಉಂಗುರ ಹಾಗೂ ಕಿವಿಯ ಓಲೆ ಯನ್ನು ನುಂಗುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದ ಆರೋಪಿ ನಿರಂಜನ್ ಭಟ್‌ಗೆ ಚಿಕಿತ್ಸೆ ನೀಡಿ ಉಂಗುರ ಹಾಗೂ ಕಿವಿ ಓಲೆ ಹೊರತೆಗೆದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಸುದೇಶ್ ಕುಮಾರ್ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಅನುರಾಗ್ ಶೆಟ್ಟಿ ಸಾಕ್ಷ ಹೇಳಿಕೆ ನೀಡಿದರು.
ಅದೇ ರೀತಿ ಮೃತ ಭಾಸ್ಕರ್ ಶೆಟ್ಟಿ ಜೊತೆ ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರ ಸಹೋದರ ಸುರೇಶ್ ಶೆಟ್ಟಿಯ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಮುಂದೆ ನಡೆಸಲಾಯಿತು. ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿ ಯೋಜಕ ಶಾಂತರಾಮ್ ಶೆಟ್ಟಿ ಹಾಗೂ ಅಡ್ಡ ವಿಚಾರಣೆಯನ್ನು ಆರೋಪಿಗಳ ಪರ ವಕೀಲ ತೋನ್ಸೆ ನಾರಾಯಣ ಪೂಜಾರಿ ಹಾಗೂ ವಿಕ್ರಂ ಹೆಗ್ಡೆ ನಡೆಸಿದರು.
ವಿಚಾರಣೆ ಸಂದರ್ಭ ಬೆಂಗಳೂರಿನ ಕಾರಾಗೃಹದಲ್ಲಿರುವ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತು ಜಾಮೀನ ನಲ್ಲಿ ಬಿಡುಗಡೆಗೊಂಡಿರುವ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ ಹಾಗೂ ಸಾಕ್ಷನಾಶ ಆರೋಪಿ ರಾಘವೇಂದ್ರ ನ್ಯಾಯಾಲಯದಲ್ಲಿ ಹಾಜರಿದ್ದರು. ಇನ್ನೋರ್ವ ಆರೋಪಿ ಶ್ರೀನಿವಾಸ ಭಟ್ ಗೈರು ಹಾಜರಾಗಿದ್ದರು.
ನಾಳಿನ ವಿಚಾರಣೆಯಲ್ಲಿ ಪ್ರಕರಣದ ಎರಡನೆ ತನಿಖಾಧಿಕಾರಿಯಾಗಿದ್ದ ಆಗಿನ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹಾಗೂ ಪ್ರಸ್ತುತ ಕೊಡಗು ಎಸ್ಪಿಯಾಗಿರುವ ಸುಮನಾ ಮತ್ತು ಪ್ರಕರಣ ದಾಖಲಿಸಿ ಕೊಂಡಿದ್ದ ಆಗಿನ ಮಣಿಪಾಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಗೋಪಾಲ ಕೃಷ್ಣ ಸಾಕ್ಷ ನುಡಿಯಲಿದ್ದಾರೆಂದು ಮೂಲಗಳು ತಿಳಿಸಿವೆ.







