ಎಡೋರೇಶನ್ ಮಾನೆಸ್ಟ್ರಿಗೆ ದಾಳಿ: ಸಮರ್ಥಿಸಿದ್ದ ಮಹೇಂದ್ರ ಕುಮಾರ್ ಖುಲಾಸೆ
ಮಂಗಳೂರು, ಫೆ.6: ನಗರದ ಫಳ್ನೀರ್‌ನ ಎಡೋರೇಶನ್ ಮಾನೆಸ್ಟ್ರಿಯಲ್ಲಿ 2008ರ ಸೆ.14ರಂದು ನಡೆದಿದ್ದ ದಾಳಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿದ್ದ ಆರೋಪದಲ್ಲಿ ಅಂದಿನ ಬಜರಂಗದಳದ ಮುಖಂಡ ಮಹೇಂದ್ರ ಕುಮಾರ್ ಅವರನ್ನು ಖುಲಾಸೆಗೊಳಿಸಿ ಮಂಗಳೂರು ಜೆಎಂಸಿ 2ನೇ ನ್ಯಾಯಾಲಯದ ತೀರ್ಪು ನೀಡಿದೆ.
2008ರ ಸೆ.14ರಂದು ಬೆಳಗ್ಗೆ ಮಂಗಳೂರು ಸಹಿತ ವಿವಿಧ ಕಡೆ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆದಿತ್ತು. ಅಂದು ಸಂಜೆ ಮಹೇಂದ್ರ ಕುಮಾರ್ ಸುದ್ದಿಗೋಷ್ಠಿ ನಡೆಸಿ ದಾಳಿಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು.
ಈ ಸಮರ್ಥನೆಯು ಜಿಲ್ಲೆಯ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಅಂದಿನ ಡಿಸಿಐಬಿ ಇನ್‌ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ನೇತೃತ್ವದ ಪೊಲೀಸರ ತಂಡ ಮಹೇಂದ್ರ ಕುಮಾರ್‌ರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿತ್ತು.
ಬಳಿಕ ಈ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ ಹಾಗೂ ಸುಶೀಲಾ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳೂರುನ ಜೆಎಂಎ್ಸಿ 2ನೇ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ಆರಂಭವಾಗಿ ಮಾಧ್ಯಮ ಪ್ರತಿನಿಧಿಗಳ ಸಹಿತ 12 ಮಂದಿಯ ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಈ ಬಗ್ಗೆ ಅಂತಿಮವಾಗಿ ನ್ಯಾಯಾಧೀಶ ಮಹೇಶ್ ಬಿ.ಟಿ. ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
ಮಹೇಂದ್ರ ಕುಮಾರ್ ಪರವಾಗಿ ಪಿ.ಪಿ.ಹೆಗ್ಡೆ ಅಸೋಸಿಯೇಟ್ಸ್‌ನ ನ್ಯಾಯವಾದಿ ರಾಜೇಶ್ ಕುಮಾರ್ ಅಮ್ಟಾಡಿ ವಾದ ಮಂಡಿಸಿ, ಮಹೇಂದ್ರ ಕುಮಾರ್ ಅಂದು ಸುದ್ದಿಗೋಷ್ಠಿಯಲ್ಲಿ ಕೇವಲ ಮತಾಂತರದ ಬಗ್ಗೆ ಮಾತ್ರ ಮಾತನಾಡಿದ್ದು ಯಾವುದೇ ಕೋಮು ಪ್ರಚೋದನೆ ಮಾಡುವ ಹೇಳಿಕೆಗಳನ್ನು ನೀಡಿಲ್ಲ. ಅಲ್ಲದೆ ಕ್ರೈಸ್ತ ಧರ್ಮದ ಸಾಮಾಜಿಕ ಸೇವೆಯನ್ನು ಶ್ಲಾಸಿದ್ದರು. ಇದರಿಂದ ಅವರ ಮೇಲಿನ ಆರೋಪವನ್ನು ಕೈ ಬಿಡಬೇಕು ಎಂದು ವಾದಿಸಿದ್ದರು.







