ಸಾಹಿತ್ಯ ಕ್ಷೇತ್ರದಲ್ಲಿ ಶುದ್ಧ-ಅಶುದ್ಧ ಎಂಬುದು ಇಲ್ಲ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಫೆ.6: ಚಳವಳಿಗಳೊಂದಿಗೆ ಸಂಬಂಧವಿರುವವರು ಶುದ್ಧ ಸಾಹಿತ್ಯ ಬರೆಯುವುದಿಲ್ಲ ಎಂಬ ವಾದವಿದೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಶುದ್ಧ-ಅಶುದ್ಧ ಎಂಬುದು ಯಾವುದೂ ಇಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.
ಬುಧವಾರ ನಗರದ ಕಸಾಪದಲ್ಲಿ ಅ.ನ.ಕೃ ಕನ್ನಡ ಸಂಘ ಹಾಗೂ ಕರುನಾಡ ಸಿರಿ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ದ್ವಾರನಕುಂಟೆ ಪಾತಣ್ಣ ಅವರ ‘ಬೇಲಿ ಮೇಲಿನ ಹೂ’ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶತಮಾನದಿಂದಲೂ ಚಳವಳಿಯೊಂದಿಗೆ ಹಲವಾರು ಸಾಹಿತಿಗಳ ಸಂಬಂಧವಿದೆ. ವಚನಕಾರರಿಂದ ಹಿಡಿದು ಮನುಷ್ಯ ಜಾತಿ ತಾನೊಂದೆ ವಲಂ ಎಂದ ರಾಷ್ಟ್ರಕವಿ ಕುವೆಂಪು, ದಾ.ರಾ.ಬೇಂದ್ರೆ ಸೇರಿದಂತೆ ಅನೇಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚಳವಳಿಯೊಂದಿಗೆ ಸಂಪರ್ಕವನ್ನಿಟ್ಟುಕೊಂಡವರಾಗಿದ್ದಾರೆ ಎಂದು ಅವರು ತಿಳಿಸಿದರು.
ಚಳವಳಿಯ ಜತೆಗೆ ಇರುವವರು ಸೃಜನಶೀಲತೆಗೆ ವಿರುದ್ಧವಾಗಿ ಬರೆಯುತ್ತಾರೆ ಎಂಬುದು ಶುದ್ಧ ಸುಳ್ಳು. ಆದರೆ, ಚಳುವಳಿಗಾರರಿಗೆ ಒಂದು ನೈತಿಕತೆ ಬೇಕು, ಸೈದ್ಧಾಂತಿಕ ಬದ್ಧತೆ ಬೇಕು. ಜನರು ಸಿದ್ಧಾಂತವನ್ನು ನಿರೀಕ್ಷೆ ಮಾಡುತ್ತಾರೆ. ಅದರ ಜತೆಗೆ ನೈತಿಕತೆಯನ್ನೂ ನಿರೀಕ್ಷೆ ಮಾಡುತ್ತಾರೆ. ಹೀಗಾಗಿ, ಚಳವಳಿಗಾರರಿಗೆ ಬರೆಯುವ, ಮಾತಿನಲ್ಲಿರುವ ಬದ್ಧತೆ ಬದುಕಿನಲ್ಲಿಯೂ ಇರಬೇಕು ಎಂದ ಅವರು, ಅಕ್ಷರ ವರ್ಗ ಚಳವಳಿಯೊಂದಿಗೆ ಸಂಪರ್ಕವಿದ್ದರೆ ದೊಡ್ಡ ಸಾಹಿತಿಯಾಗುತ್ತಾರೆ ಎಂದರು.
ಲೇಖಕ ಪಾತಣ್ಣ ತಮ್ಮ ಕೃತಿಯಲ್ಲಿ ಗ್ರಾಮೀಣ ಬದುಕಿನ ಸಮೃದ್ಧಿಯನ್ನು ಹಿಡಿದಿಟ್ಟಿದ್ದಾರೆ. ಒಂದು ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಪರಿಸರಕ್ಕೆ ಸಂಬಂಧಿಸಿದಂತೆ ಬರೆದಿದ್ದಾರೆ ಎಂದ ಅವರು, ಗ್ರಾಮೀಣ ಬದುಕಿನ ಬಗೆಗೆ ಹಲವಾರು ಜನ ಬರೆದಿದ್ದಾರೆ. ಆರಂಭದ ದಿನಗಳಲ್ಲಿ ಬಂದಂತಹ ಕೃತಿಗಳನ್ನು ನೋಡಿದರೆ ಈ ಕೃತಿಯಲ್ಲಿರುವ ವಿಷಯ ನೈಜ ವಸ್ತು, ಹೆಗ್ಗಳಿಕೆಯ ಚಿತ್ರಣವಿದೆ ಎಂದು ಬಣ್ಣಿಸಿದರು.
ಕರ್ನಾಟಕದಲ್ಲಿ ನಡೆದ ಚಳವಳಿಯ ಕಥಾನಕನಗಳೇ ಈ ಕೃತಿಯಲ್ಲಿವೆ ಅನ್ನಿಸುತ್ತದೆ. ಮಹಿಳೆಯರು, ವಿದ್ಯಾರ್ಥಿ-ಯುವಜನರು, ರೈತರು, ಮಕ್ಕಳ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಸಂಕಷ್ಟಗಳ ಕುರಿತು ಬರೆಯುತ್ತೇವೆ ಎಂದರೆ ಅದಕ್ಕೆ ಚಳವಳಿಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಲೋಕದ ಅನುಭವವನ್ನು ಪ್ರಗತಿಪರವಾಗಿ, ಚಲನಶೀಲವಾಗಿ ಕಟ್ಟಿಕೊಡುವ ಮೂಲಕ ಚಳವಳಿಯು ನಿರಂತರವಾಗಿ ಇರುತ್ತದೆ ಎಂಬುದನ್ನು ಕಟ್ಟಿಕೊಟ್ಟಿದ್ದಾರೆ ಎಂದು ಬರಗೂರು ನುಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಲೇಖಕ ದ್ವಾರನಕುಂಟೆ ಪಾತಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







