ಕಬ್ಬನ್ ಪಾರ್ಕ್: ಮಕ್ಕಳನ್ನು ಆಕರ್ಷಿಸಿದ ಗಂಗಾ ನದಿ ಪ್ರದೇಶದ ಚಿತ್ರಣ
ಬೆಂಗಳೂರು, ಫೆ.6: ವಿವೇಕಾನಂದರು, ಸಾಧು-ಸಂತರ ವೇಷಾಧಾರಿ ಮಕ್ಕಳ ಒಡಾಟ, ಹಿಮಾಲಯ ಪರ್ವತ ಶ್ರೇಣಿಗಳು, ಗಂಗಾ ನದಿ ಪ್ರದೇಶದ ಚಿತ್ರಣ ಮಕ್ಕಳನ್ನು ಆಕರ್ಷಿಸುವಂತಿದ್ದವು.
ಬುಧವಾರ ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದಲ್ಲಿ ಪೂರ್ಣ ಪ್ರಮತಿ ಶಾಲಾ ಮಕ್ಕಳು ಸಾನಂದ ಸ್ವಾಮೀಜಿಯ ಶ್ರದ್ಧಾಂಜಲಿಯ ಅಂಗವಾಗಿ ಧರಿಸಿದ್ದ ವೇಷಭೂಷಣಗಳು ಆಕರ್ಷಣಿಯವಾಗಿತ್ತು. ಗಂಗಾನದಿಯ ಉಳಿವಿಗಾಗಿ ಉಪವಾಸ ಸತ್ಯಾಗ್ರಹ ಮಾಡಿ ಜೀವವನ್ನೇ ತ್ಯಜಿಸಿದ ಸಾನಂದ ಸ್ವಾಮೀಜಿ ಅವರ ಗುರುಕುಲವನ್ನು ಇಲ್ಲಿ ನಿರ್ಮಿಸಿದ್ದು, ಎಲ್ಲರ ಆಕರ್ಷಕ ಕೇಂದ್ರವಾಗಿತ್ತು.
ವಿವಿಧ ಮತ್ಸಗಳು: ಪೂರ್ಣ ಪ್ರಮತಿ ಉತ್ಸವದಲ್ಲಿ ಮಕ್ಕಳು ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ಒಂದು ಮಳಿಗೆಯಲ್ಲಿ ಗಂಗಾನದಿ ತಟದಲ್ಲಿ ಇರುವ ಮೀನುಗಳ ಬಗ್ಗೆ ವಿವರವಾಗಿ ಬರೆದ ಪಟ್ಟಿ ಹಾಕಲಾಗಿತ್ತು. ಬಾಟ, ಗೋಡ್ಡನ್ ಮಷಿನ್, ಸಿಲ್ವರ್ ಮಷೀಸ್, ವಾಲಗೋ, ಸ್ಪಾರ್ಟೆಡ್ ಬಾರ್ಬ, ಬ್ರೋನ್ಜ್, ಇಂಡಿಯನ್ ಮೋಟೆಡ್, ಕ್ಲೌನ್ ಫೈನ್ ಫಿಶ್, ಸ್ನೌ ಹೀಗೆ ವಿವಿಧ ಮತ್ಸ್ಯಗಳ ಬಗ್ಗೆ ತಿಳಿಸಲಾಯಿತು.
ವಿವಿಧ ಹೂಗಳು: ಗಂಗಾತೀರದಲ್ಲಿ ಮತ್ತು ಸುತ್ತಮುತ್ತ ವಾಸಿಸುವ ನೂರಾರು ಪ್ರಾಣಿ ಪಕ್ಷಿಗಳನ್ನು ನಾಮಲಕ ಹಾಕಲಾಗಿತ್ತು. ಅಲ್ಲದೆ, ಗಂಗಾ ನದಿಯ ತೀರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಟೇಮ್ಸ್, ಕ್ಯಾಲಿಕ್ಸೃ್, ಅಕ್ಸಿಸ್, ಕೊರೋಲ್ಲ, ಪಿಸ್ಟಿಲ್, ಅರ್ಕಲೋಟೆ ಸೇರಿದಂತೆ ವಿವಿಧ ಜಾತಿಯ ಹೂವುಗಳನ್ನು ಪ್ರದರ್ಶಿಸಲಾಗಿತ್ತು.
ಮಕ್ಕಳಿಂದ ವಿವರಣೆ : ಗಂಗಾತಟದಲ್ಲಿ ಸಾನಂದ ಸ್ವಾಮೀಜಿ ಅವರು ತಪಸ್ಸು ಮಾಡಿದ ಸ್ಥಳ, ಸಾನಂದ ಗುರುಕುಲ, ಗಂಗಾತೀರದ ಮತ್ತು ಸುತ್ತಮುತ್ತಲಿನ ಪಕ್ಷಿಗಳ, ಗಂಗಾ ನದಿಯ ಉಗಮ ಮತ್ತು ಸ್ಥಳಗಳು, ಸಹಜ ಕೃಷಿ, ಪೂರ್ಣ ಪ್ರಮತಿ ಸಂತೆ ಸೇರಿದಂತೆ ಗಂಗಾ ನದಿ ಹರಿಯುವ ಸ್ಥಳಗಳ ಬಗ್ಗೆ ಪೂರ್ಣ ಪ್ರಮತಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದರು. ಪ್ರತಿಯೊಂದು ಲಕವು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರೆಯಲಾಗಿತ್ತು. ಗಂಗಾನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದರೆ ಅಲ್ಲಿನ ಪರಿಸರಕ್ಕೆ ಏನೆಲ್ಲ ತೊಂದರೆಯಾಗಲಿದೆ. ಜನರಿಗೆ ಆಗುವ ಸಮಸ್ಯೆ ಏನು ಎಂಬುದನ್ನು ವಿದ್ಯಾರ್ಥಿಗಳು ಸವಿವರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಪೂರ್ಣ ಪ್ರಮತಿ ಉತ್ಸವಕ್ಕೆ ಪೂರ್ಣಕುಂಭದೊಂದಿಗೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಶ್ರೀಗಳಿಗೆ ಪುಟಾಣಿ ಮಕ್ಕಳು ವೇದ ಸಂಸ್ಕೃತ ಪಠಿಸಿದರು. ಬಾಲಭವನದಲ್ಲಿ ನಿರ್ಮಿಸಲಾಗಿದ್ದ ಸಾನಂದ ಸ್ವಾಮೀಜಿ ಅವರ ಗುರುಕುಲ ವೀಕ್ಷಿಸಿದರು.
ಗಂಗಾನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿದರೆ ಕೈಗಾರಿಕೆಗಳು ತಲೆ ಎತ್ತಲಿದ್ದು, ಕೈಗಾರಿಕೆಗಳು ಕೊಳಚೆ ನೀರನ್ನು ನದಿಗೆ ಬಿಡುತ್ತಿವೆ. ಇದರಿಂದ ಅನೇಕ ಜನರ ಸಾಂಪ್ರದಾಯಿಕ ಭಾವನೆಗೆ ಧಕ್ಕೆ ಉಂಟಾಗಲಿದೆ. ವಾತಾವರಣ ಹದಗೆಡುವುದಲ್ಲದೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ
ಗಂಗಾನದಿ ಕೆಲ ಲವಣಾಂಶಗಳನ್ನು ಕೇಂದ್ರೀಕರಿಸಿಕೊಂಡು ಹರಿಯುತ್ತಿದ್ದು, ಇದಕ್ಕೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟಿದರೆ ವಾತಾವರಣ ವೈಪರೀತ್ಯ ಉಂಟಾಗಲಿದೆ. ಗಂಗಾನದಿ ಹರಿಯುತ್ತಾ ನಾಲ್ಕು ನದಿಯಾಗಿ ಬೇರ್ಪಡುತ್ತದೆ. ಅಣೆಕಟ್ಟು ನಿರ್ಮಾಣದಿಂದ ಪ್ರಾಣಿ-ಪಕ್ಷಿ ಸಂಕುಲಕ್ಕೆ ಹಾನಿಯಾಗುತ್ತದೆ.
-ಪ್ರೊ.ಗೌತಮ್, ಭಾರತೀಯ ವಿಜ್ಞಾನ ಸಂಸ್ಥೆ
ಗಂಗಾನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ನಿರ್ಧಾರ ಸರಿಯಲ್ಲ. ಅಣೆಕಟ್ಟು ನಿರ್ಮಾಣ ಪ್ರಕೃತಿಗೆ ವಿರುದ್ಧವಾಗಿದ್ದು, ಸಾನಂದ ಸ್ವಾಮೀಜಿ ಇದರ ವಿರುದ್ಧ ಹೋರಾಟ ನಡೆಸಿ ಜೀವ ತ್ಯಜಿಸಿದ್ದಾರೆ. ಅಲ್ಲದೆ, ಇಂದಿಗೂ ಹೋರಾಟ ಮುಂದುವರಿದಿದೆ. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.
-ಬನ್ನಂಜೆ ಗೋವಿಂದಾಚಾರ್ಯ, ಚಿಂತಕ







