42 ಸಾಧಕರಿಗೆ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪ್ರದಾನ

ಹೊಸದಿಲ್ಲಿ, ಫೆ.6: ಖ್ಯಾತ ಕೊಳಲುವಾದಕ ರಾಜೇಂದ್ರ ಪ್ರಸನ್ನ, ಕಥಕ್ ನೃತ್ಯಗಾರ್ತಿ ಶೋಭಾ ಕೋಸರ್, ಜನಪದ ಗಾಯಕ ಅನ್ವರ್‌ಖಾನ್ ಮಂಗಣಿಯಾರ್, ಒಡಿಸ್ಸಿ ನೃತ್ಯಗಾರ್ತಿ ಸುಜಾತಾ ಮೊಹಾಪಾತ್ರ ಸೇರಿದಂತೆ 42 ಕಲಾವಿದರಿಗೆ ರಾಷ್ಟ್ರಪತಿಯವರು 2017ರ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ಹಿಂದುಸ್ತಾನಿ ಹಾಡುಗಾರಿಕೆಗೆ ನೀಡಿದ ಕೊಡುಗೆಗಾಗಿ ಉಮಾಕಾಂತ್ ಮತ್ತು ರಮಾಕಾಂತ್ ಗುಂಡೆಚರಿಗೆ ನೀಡಲಾಗಿರುವ ಜಂಟಿ ಪ್ರಶಸ್ತಿ ಸಹಿತ ಐದು ವಿಭಾಗಗಳಲ್ಲಿ ಒಟ್ಟು 42 ಕಲಾವಿದರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು. ಹಿಂದುಸ್ತಾನಿ ಗಾಯಕ ಲಲಿತ್ ಜೆ ರಾವ್, ತಬ್ಲಾ ವಾದಕ ಯೋಗೇಶ್ ಸಾಮ್ಸಿ, ಕೊಳಲು ಮತ್ತು ಶೆಹನಾಯ್ ವಾದಕರಾದ ರಾಜೇಂದ್ರ ಪ್ರಸನ್ನ, ಕರ್ನಾಟಕ ಗಾಯಕಿ ಎಂಎಸ್ ಶೀಲಾ, ಕರ್ನಾಟಕ ವೀಣಾ ವಾದಕಿ ಸುಮಾ ಸುಧೀಂದ್ರ, ಕರ್ನಾಟಕ ಮೃದಂಗ ವಾದಕ ತಿರುವಾರೂರ್ ವೈದ್ಯನಾಥನ್, ಕರ್ನಾಟಕ ಕೊಳಲುವಾದಕ ಶಶಾಂಕ್ ಸುಬ್ರಮಣ್ಯಂ, ಸುಗಮ ಸಂಗೀತ ಕ್ಷೇತ್ರದಲ್ಲಿ ಮಧುರಾಣಿ ಮತ್ತು ಹೇಮಂತಿ ಶುಕ್ಲ, ಗುರ್ಬಾನಿ ಹಾಡುಗಾರಿಕೆಯಲ್ಲಿ ಗುರ್ನಾಮ್ ಸಿಂಗ್. ನೃತ್ಯ ಕ್ಷೇತ್ರದಲ್ಲಿ 9 ಕಲಾವಿದರು ಪ್ರಶಸ್ತಿ ಪಡೆದಿದ್ದಾರೆ.
ಇವರೆಂದರೆ ಭರತನಾಟ್ಯಂನಲ್ಲಿ ರಮಾ ವೈದ್ಯನಾಥನ್, ಕಥಕ್‌ನಲ್ಲಿ ಶೋಭಾ ಕೋಸರ್, ಕಥಕ್ಕಳಿಯಲ್ಲಿ ಮದಾಂಬಿ ಸುಬ್ರಮಣಿಯನ್ ನಂಬೂದಿರಿ, ಮಣಿಪುರಿ ನೃತ್ಯದಲ್ಲಿ ಒಯಿನಮ್ ಒಂಬಿ ಧೋನಿ ದೇವಿ, ಕೂಚಿಪುಡಿಯಲ್ಲಿ ದೀಪಿಕಾ ರೆಡ್ಡಿ, ಸತ್ರಿಯಾ ನೃತ್ಯದಲ್ಲಿ ರಾಮಕೃಷ್ಣ ತಾಲೂಕ್ದಾರ್, ಚಹಾವು ನೃತ್ಯದಲ್ಲಿ ಜನಮೇಜಯ್ ಸಾಯ್‌ಬಾಬು, ನೃತ್ಯ ಸಂಯೋಜಕ ಅಶಿತ್ ದೇಸಾಯಿ.
9 ಮಂದಿ ಖ್ಯಾತ ರಂಗಭೂಮಿ ಕಲಾವಿದರು ಪ್ರಶಸ್ತಿ ಪಡೆದಿದ್ದಾರೆ. ಅವರೆಂದರೆ- ನಾಟಕ ರಚನೆಗಾರ ಅಭಿರಾಮ್ ದಾಮೋದರ್ ಭದ್‌ಕಾಮ್ಕರ್, ನಿರ್ದೇಶಕರಾದ ಸುನಿಲ್ ಗಣೇಶ್ ಶಾನುಭೋಗ್ ಹಾಗೂ ಬಾಪಿ ಬೋಸ್, ನಟನೆಗಾಗಿ ಹೇಮಾ ಸಿಂಗ್, ದೀಪಕ್ ವಿರಾಟ್ ತಿವಾರಿ ಮತ್ತು ಅನಿಲ್ ಟಿಕ್ಕೂ, ನಾಟಕ ಶಿಕ್ಷಣಕ್ಕಾಗಿ ನೂರುದ್ದೀನ್ ಅಹ್ಮದ್, ಬೆಳಕಿನ ವ್ಯವಸ್ಥೆಗಾಗಿ ಅವತಾರ್ ಸಾಹ್ನಿ, ನಾಟಕ ಸಾಹಿತ್ಯಕ್ಕೆ ಮಣಿಪುರದ ಶುಮನ್ ಲೀಲಾ.
ಜನಪದ ಮತ್ತು ಬುಡಕಟ್ಟು ಸಂಗೀತ, ನೃತ್ಯ, ರಂಗಕಲೆ ಮತ್ತು ಸೂತ್ರದ ಬೊಂಬೆ ಕಲೆಯಲ್ಲಿ 10 ಖ್ಯಾತ ಕಲಾವಿದರು ಪ್ರಶಸ್ತಿ ಪಡೆದಿದ್ದಾರೆ. ಅವರೆಂದರೆ- ಜಾನಪದ ಸಂಗೀತ ಕ್ಷೇತ್ರದಲ್ಲಿ ಅನ್ವರ್ ಖಾನ್ ಮಂಗಣಿಯಾರ್, ಮಹಾರಾಷ್ಟ್ರದ ಜಾನಪದ ಕಲೆಗಾಗಿ ಪ್ರಕಾಶ್ ದಹದೇವ್ ಖಂಡ್ಗೆ, ಅಸ್ಸಾಂನ ಸಾಂಪ್ರದಾಯಿಕ ಸಂಗೀತ ಕ್ಷೇತ್ರ(ಖೋಲ್)ದಲ್ಲಿ ಜಗನ್ನಾಥ ಬಾಯನ್, ಬಿಹಾರ ಜಾನಪದ ಸಂಗೀತದಲ್ಲಿ ರಾಮಚಂದ್ರ ಮಾಂಝಿ, ಛತ್ತೀಸ್‌ಗಢ ಜಾನಪದ ರಂಗಕಲೆಯಲ್ಲಿ ರಾಕೇಶ್ ಕುಮಾರ್ ತಿವಾರಿ, ಪಶ್ಚಿಮ ಬಂಗಾಳಿ ಜಾನಪದ ಸಂಗೀತ(ಬೌಲ್)ದಲ್ಲಿ ಪಾರ್ವತಿ ಬೌಲ್, ಮಿಝೊರಾಂ ಜಾನಪದ ಸಂಗೀತದಲ್ಲಿ ಕೆಸಿ ರುನ್ರೇಮ್‌ಸಂಗಿ, ಜಾರ್ಖಂಡ್ ಜಾನಪದ ಸಂಗೀತದಲ್ಲಿ ಮುಕುಂದ್ ನಾಯಕ್, ಪಶ್ಚಿಮ ಬಂಗಾಳ ಸೂತ್ರದ ಬೊಂಬೆಯಾಟದಲ್ಲಿ ಸುದೀಪ್ ಗುಪ್ತಾ.
ಪ್ರದರ್ಶನ ಕಲೆ ವಿಭಾಗದಲ್ಲಿ ಸಮಗ್ರ ಕೊಡುಗೆಗಾಗಿ ಸಂಧ್ಯ ಪುರೆಚ್ಚ ಹಾಗೂ ಪಾಂಡಿತ್ಯಕ್ಕಾಗಿ ವಿಜಯ್ ವರ್ಮರಿಗೆ ಪ್ರಶಸ್ತಿ ನೀಡಲಾಗಿದೆ.







