ಮಂಗನ ಕಾಯಿಲೆ ಚಿಕಿತ್ಸೆಯಲ್ಲಿ ಲೋಪ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರದಿಂದ ಸಮಿತಿ ರಚನೆ

ಶಿವಮೊಗ್ಗ, ಫೆ. 6: ಮಂಗನ ಕಾಯಿಲೆ ಕಾಣಿಸಿಕೊಂಡ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾಗರ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ಕೆಎಫ್‍ಡಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ವಿಚಾರಣೆ ಕೈಗೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ಈ ಕಾಯಿಲೆ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ದ್ವಿಸದಸ್ಯ ಸಮಿತಿ ರಚಿಸಿದೆ.
ರಾಜ್ಯ ಸರ್ಕಾರ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚಿಸಿದೆ. ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಜ್ಞರ ಸಮಿತಿಯು ಆರೋಗ್ಯ, ಪಶು ವೈದ್ಯಕೀಯ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿತು. ಮಂಗನ ಕಾಯಿಲೆಯ ವಿವರ ಪಡೆದುಕೊಂಡಿತ್ತು. ಜೊತೆಗೆ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಲಹೆ-ಸೂಚನೆ ನೀಡಿತು.
ಲೋಪ: ಮಳೆಗಾಲಕ್ಕಿಂತ ಪೂರ್ವದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೆಪ್ಟಂಬರ್ ಮಧ್ಯ ವಾರದಿಂದ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಿದರೆ ಮಂಗನ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ' ಎಂದು ವಿಚಾರಣಾ ಸಮಿತಿಯ ಸದಸ್ಯ ಮದನ್ ಗೋಪಾಲ್ ಅಭಿಪ್ರಾಯಪಟ್ಟರು.
ಮಂಗನ ಕಾಯಿಲೆ ನಿಯಂತ್ರಣ ಕುರಿತಾಗಿ ಬಹಳ ಹಿಂದೆಯೇ ನಿರ್ದಿಷ್ಟ ಮಾರ್ಗಸೂಚಿ (ಎಸ್‍ಒಪಿ) ಯನ್ನು ರಚಿಸಲಾಗಿದೆ. ಎಲ್ಲಾ ಇಲಾಖೆಗಳ ಜವಾಬ್ದಾರಿ ಹಾಗೂ ಕೈಗೊಳ್ಳಬೇಕಾದ ಏಕರೂಪದ ಕ್ರಮಗಳ ಬಗ್ಗೆ ಇದರಲ್ಲಿ ಸ್ಪಷ್ಟಪಡಿಸಲಾಗಿದೆ. ಮಳೆಗಾಲಕ್ಕಿಂತ ಪೂರ್ವದಲ್ಲೇ ಮಂಗನ ಕಾಯಿಲೆ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳಿಗೆ ಚಾಲನೆ ನೀಡಿ, ಡಿಎಂಪಿ ತೈಲ ಹಾಗೂ ಲಸಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಬೇಕು. ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಂಗನ ಕಾಯಿಲೆಯಿಂದ ಸಾವು ನೋವಾಗುವುದನ್ನು ತಪ್ಪಿಸಬಹುದಾಗಿದೆ. ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಏಳೆಂಟು ಸಾವು ಸಂಭವಿಸಿದೆ ಎಂದರೆ ನಿರ್ವಹಣೆಯಲ್ಲಿ ಎಲ್ಲೋ ಲೋಪವಾಗಿದೆ ಎಂದರ್ಥ ಎಂದು ತಿಳಿಸಿದರು.
ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಾಗರದಲ್ಲಿ ಈ ಹಿಂದೆ ಆರಂಭಿಸಲಾಗಿದ್ದ ಕೆಎಫ್‍ಡಿ ಘಟಕದಲ್ಲಿ ವೈದ್ಯಾಧಿಕಾರಿ ಹಾಗೂ ತಜ್ಞ ಸಿಬ್ಬಂದಿಗಳು ಇಲ್ಲದ ಕಾರಣ ಹಿನ್ನಡೆ ಉಂಟಾಗಿರುವುದನ್ನು ಗಮನಿಸಲಾಗಿದೆ. ಈ ಘಟಕದಲ್ಲಿ ಅಗತ್ಯ ವೈದ್ಯಾಧಿಕಾರಿ, ಎಂಟಮಾಲಜಿಸ್ಟ್ ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ನೆರೆಯ ಜಿಲ್ಲೆಗಳಿಂದ ಮಂಗಗಳನ್ನು ರಾತ್ರಿ ವೇಳೆ ಜಿಲ್ಲೆಯ ಕಾಡುಗಳ ಬಳಿ ಬಿಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದರಿಂದ ಜಿಲ್ಲೆಯಲ್ಲಿ ಮಂಗಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ನೋಡಲ್ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಸಮಿತಿಯ ಸದಸ್ಯ ಡಾ.ಶಿವಕುಮಾರ್ ವೀರಯ್ಯ ಮಾಜಿ ನಿರ್ದೇಶಕರು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅಪರ ಜಿಲ್ಲಾಧಿಕಾರಿ ಅನುರಾಧ, ಡಿಎಚ್‍ಒ ರಾಜೇಶ್ ಸುರಗಿಹಳ್ಳಿ, ಡಾ.ಕಿರಣ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಲೆನಾಡಿಗೆ ಮಂಗನ ಕಾಯಿಲೆ ಹೊಸತಲ್ಲ
'ಮಲೆನಾಡಿಗೆ ಮಂಗನ ಕಾಯಿಲೆಯು ಹೊಸತಲ್ಲ. ಕಳೆದ ಹಲವು ದಶಕಗಳಿಂದ ಇದು ಮಲೆನಾಡಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಪ್ರಸ್ತುತ ಹಲವೆಡೆ ಕಾಯಿಲೆ ಕಾಣಿಸಿಕೊಂಡಿದ್ದು, ಇದರ ನಿಯಂತ್ರಣಕ್ಕೆ ಕೈಗೊಂಡ ಪೂರ್ವಭಾವಿ ಕ್ರಮಗಳು, ಜನಜಾಗೃತಿ ಕಾರ್ಯಕ್ರಮ ಮತ್ತು ಅಧಿಕಾರಿ-ಸಿಬ್ಬಂದಿಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದರ ಮಾಹಿತಿ ಸಂಗ್ರಹಿಸಲಾಗಿದೆ. ಮೊದಲು ಅಧಿಕಾರಿಗಳು ಸ್ಥಳೀಯ ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಜಾಗೃತಿ ಹಾಗೂ ಕಾಯಿಲೆ ಬಗ್ಗೆ ತಿಳಿಹೇಳಬೇಕು. ಆಗ ಜನರು ಎಚ್ಚರಿಕೆಯಿಂದಿರುತ್ತಾರೆ. ಕಾಯಿಲೆ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಎಲ್ಲ ರೀತಿಯ ಅಗತ್ಯ ನೆರವು ಒದಗಿಸಿದೆ ಎಂದು ಮದನ್ ಗೋಪಾಲ್‍ರವರು ತಿಳಿಸಿದ್ದಾರೆ.
ಪೊಲೀಯೋ ಲಸಿಕೆ ಹಾಕುವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮೈಕ್ರೋ ಪ್ಲ್ಯಾನ್ ಮೂಲಕ ಯೋಜನೆ ಸಿದ್ದಪಡಿಸುತ್ತದೆಯೋ, ಅದೇ ರೀತಿಯಲ್ಲಿ ಮಂಗನ ಕಾಯಿಲೆಗೂ ಕೂಡ ಯೋಜನೆಯನ್ನು ವ್ಯವಸ್ಥಿತವಾಗಿ ಸಿದ್ದಪಡಿಸಿ ಅನುಷ್ಠಾನಗೊಳಿಸಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಾನಿಯಾಗುತ್ತಿರಲಿಲ್ಲ. ಇದೇ ವೇಳೆ ಮಂಗನ ಕಾಯಿಲೆ ಹರಡದಂತೆ ತೆಗೆದುಕೊಳ್ಳಬೇಕಾದ ಅನೇಕ ಮುನೆಚ್ಚರಿಕೆ, ಪೂರ್ವಭಾವಿ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ತಿಳಿ ಹೇಳಿದರು. ಈ ವಿಷಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸುವಂತೆಯೂ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್‍ರವರು ಮಾತನಾಡಿ, ಮಂಗನ ಕಾಯಿಲೆ ವ್ಯಾಕ್ಸಿನ್ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂಬ ಅಪನಂಬಿಕೆ ಕೆಲವರಲ್ಲಿದೆ. ಹಾಗೆಯೇ ಉಣ್ಣೆ ಕಚ್ಚುವ ಮೊದಲು ಎಣ್ಣೆ ಸವರಿಕೊಳ್ಳಬೇಕು. ಯಾವ ಕಂಪೆನಿಯ ಎಣ್ಣೆ ಹಚ್ಚಿದರೆ ಒಳ್ಳೆಯದು, ಅದರ ಗುಣಮಟ್ಟ ಮತ್ತು ಕಡ್ಡಾಯವಾಗಿ ವ್ಯಾಕ್ಸಿನೇಷನ್ ಮಾಡಿಕೊಳ್ಳಬಕೆಂಬುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಹಾಗೂ ಅಪಪ್ರಚಾರವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಜನರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಪಕ್ಷಿ, ಜಾನುವಾರು ಸೇರಿದಂತೆ ಇನ್ನಿತರೆ ಪ್ರಾಣಿಗಳಿಂದ ಕೂಡ ಉಣ್ಣೆಗಳು ಹರಡುವ ಸಂಭವವಿದೆ. ಉಣ್ಣೆ ಕಚ್ಚಿದಾಗ ಮಾತ್ರ ಕಾಯಿಲೆಯ ಲಕ್ಷಣ ಕಂಡುಬರುತ್ತದೆ. ಈ ಬಗ್ಗೆ ಕೂಡ ಜಾಗೃತಿ ವಹಿಸುವುದು ಮುಖ್ಯ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.







